News headlines 27-07-2025 | ರಸಗೊಬ್ಬರ ಅಭಾವ: ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ; ಮಳೆ: ಶೃಂಗೇರಿ-ಮಂಗಳೂರು ಹೆದ್ದಾರಿ ಬಂದ್; ಕೋಲಾರ: ಉಗ್ರ ಕೃತ್ಯಗಳ ಬಗ್ಗೆ ಸಾಮಾಜಿಕ ಜಾಲತಾಣ ಪೋಸ್ಟ್: ಬಾಲಕ ಪೊಲೀಸ್ ವಶಕ್ಕೆ!

News headlines
ಸುದ್ದಿ ಮುಖ್ಯಾಂಶಗಳುonline desk

1. ರಸಗೊಬ್ಬರ ಅಭಾವ : ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ರಾಜ್ಯದಲ್ಲಿ ತಲೆದೋರಿರುವ ರಸಗೊಬ್ಬರ ಅಭಾವ ವಿರುದ್ಧ ಸೋಮವಾರ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಸಜ್ಜಾಗಿದೆ. ಬೆಂಗಳೂರಿನಲ್ಲಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡೋದಾಗಿ ಘೋಷಿಸಿದ್ದಾರೆ. ಬೆಂಗಳೂರು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರೈತ ಮೋರ್ಚಾ ವತಿಯಿಂದ ಬಿಜೆಪಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ.ಮುಂಗಾರು ಶೀಘ್ರ ಆರಂಭವಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಮುಂಚೆಯೇ ಸಿದ್ಧತೆ ಮಾಡಿಕೊಂಡಿಲ್ಲ, ಮುಂಚೆಯೇ ಕೇಂದ್ರಕ್ಕೆ ಪತ್ರ ಬರೆಯಬೇಕಿತ್ತು. ಈಗ ಪತ್ರ ಬರೆಯೋದಲ್ಲ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

2. ಕಾಂಗ್ರೆಸ್ ಮುಖಂಡನ ಹತ್ಯೆ

ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನೋರ್ವನ ಬರ್ಬರ ಹತ್ಯೆಗೈದಿರುವ ಘಟನೆ ಜಿಲ್ಲೆಯ ಬೆಂಗಳೂರು ದಕ್ಷಿಣ(ರಾಮನಗರ) ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಗ್ರಾಮದ ಡಾಬಾವೊಂದರ ಬಳಿ ನಡೆದಿದೆ.

ಜಮೀನು ವಿವಾದ ಹಿನ್ನೆಲೆಯಲ್ಲಿ ನಾಲ್ಕೈದು ಜನರ ತಂಡ, ಡಾಬಾವೊಂದರಲ್ಲಿ ಪಾರ್ಟಿ ಮಾಡುತ್ತಿದ್ದ ನಂಜೇಶ್ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಸಿಕ್ಕ ಸಿಕ್ಕಲ್ಲಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರಿಂದ ತೀವ್ರ ರಕ್ತಸ್ರಾವದಿಂದ ಅಚ್ಚಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಂಜೇಶ್ ಸಾವನ್ನಪ್ಪಿದ್ದಾರೆ. ನಂಜೇಶ್, ಕೆಲವು ದಿನಗಳ ಹಿಂದೆಯೇ ತನ್ನ ಗ್ರಾಮದಲ್ಲಿನ ಜಮೀನಿನ ಸೈಟ್ ವಿವಾದಕ್ಕೆ ಸಂಬಂಧಪಟ್ಟಂತೆ ಸ್ಥಳೀಯರೊಂದಿಗೆ ಜಗಳ ಮಾಡಿಕೊಂಡಿದ್ದು, ಕೊಲೆಗೆ ಇದೇ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.

3. ಮಲೆನಾಡು ಭಾಗದಲ್ಲಿ ಮಳೆ: ಶೃಂಗೇರಿ- ಮಂಗಳೂರು ಹೆದ್ದಾರಿ ಬಂದ್

ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೊಡಗು, ಚಿಕ್ಕಮಗಳೂರು, ಉಡುಪಿ , ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಜುಲೈ 31ರ ವರೆಗೂ ಕರ್ನಾಟಕದಲ್ಲಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮಲೆನಾಡು ಜಿಲ್ಲೆಗಳಲ್ಲೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶೃಂಗೇರಿಯಲ್ಲಿ ಭಾರೀ ಮಳೆ ಹಿನ್ನೆಲೆ ನೆಮ್ಮಾರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡ ಕುಸಿತ ಆಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಕೆರೆಕಟ್ಟಿ ಸಮೀಪದ ಶೃಂಗೇರಿ-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ಮೇಲೆ ಗುಡ್ಡ ಕುಸಿದಿದ್ದು ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ.

4. ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ಪತಿ ವಿರುದ್ಧ ಪೋಕ್ಸೋ ಕೇಸ್

ರಾಯಚೂರು ಜಿಲ್ಲೆಯ ಗುರ್ಜಾಪುರ ಬ್ಯಾರೇಜ್ ಬಳಿ ಫೋಟೋ ತೆಗೆಯುವ ನೆಪದಲ್ಲಿ ಪತ್ನಿಯೇ ತನ್ನನ್ನು ನದಿಗೆ ತಳ್ಳಿದ್ದಾಳೆಂದ ಆರೋಪಿಸಿದ್ದ ವ್ಯಕ್ತಿಗೆ ಜೈಲು ಪಾಲಾಗುವ ಭೀತಿ ಎದುರಾಗಿದೆ.

ಅಪ್ರಾಪ್ತೆಯನ್ನು ವಿವಾಹವಾಗಿದ್ದ ಹಿನ್ನೆಲೆ ಬಾಲ್ಯವಿವಾಹ ನಿಷೇಧ ಕಾಯಿದೆ ಅಡಿ ಪ್ರಕರಣದಲ್ಲಿ ಸಿಲುಕಿರುವ ವ್ಯಕ್ತಿ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ 10 ಮಂದಿ ವಿರುದ್ಧ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿಂದ ಪತಿ ತಾತಪ್ಪನನ್ನ ತಳ್ಳಿ ಪತ್ನಿ ಕೊಲೆಗೆ ಯತ್ನಿಸಿದ್ದಳು ಎನ್ನುವ ಆರೋಪ ಯುವತಿ ವಿರುದ್ಧ ಕೇಳಿಬಂದಿತ್ತು. ತಾತಪ್ಪನ ಪತ್ನಿ ಅಪ್ರಾಪ್ತೆ ಎನ್ನುವ ವಿಷಯ ಸಂಚಲನಕ್ಕೆ ಕಾರಣವಾಗಿತ್ತು.ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗದ ಸೂಚನೆ ಮೆರೆಗೆ ರಾಯಚೂರಿನ ಮಹಿಳಾ ಠಾಣೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರಡಿ ಮಾತ್ರ ಕೇಸ್ ದಾಖಲಾಗಿದೆ.

5. ಉಗ್ರ ಕೃತ್ಯಗಳ ಬಗ್ಗೆ ಸಾಮಾಜಿಕ ಜಾಲತಾಣ ಪೋಸ್ಟ್: ಬಾಲಕ ಪೊಲೀಸ್ ವಶಕ್ಕೆ!

ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ, ಉಗ್ರವಾದಿ ಸಂಘಟನೆಗಳ ಕುರಿತು ಪೋಸ್ಟ್​ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಆರೋಪದಡಿ ಕೆಜಿಎಫ್ ತಾಲೂಕಿನ ದ್ಯಾವರಹಳ್ಳಿ ಗ್ರಾಮದ ಓರ್ವ ಬಾಲಕನನ್ನು ಆಂತರಿಕ ಭದ್ರತಾ ಅಧಿಕಾರಿಗಳು ಮತ್ತು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬಾಲಕ ಮೂಲತಃ ಆಂದ್ರ ಪ್ರದೇಶದ ಮುಸ್ಲಿಂ ಕುಟುಂಬಕ್ಕೆ ಸೇರಿದವನು. ಬಾಲಕನ ಕುಟುಂಬ ಹಲವು ವರ್ಷಗಳ ಹಿಂದೆ ಆಂದ್ರ ಪ್ರದೇಶದ ರಾಮಕುಪ್ಪಂ ತೊರೆದು ಕೋಲಾರ ಜಿಲ್ಲೆಯ ಕೆಜಿಎಫ್​ ತಾಲೂಕಿನ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ದ್ಯಾವರಹಳ್ಳಿ ಗ್ರಾಮದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದೆ ಎಂದು ತಿಳಿದು ಬಂದಿದೆ. ಆರೋಪಿ ಬಾಲಕನ್ನು ಪೊಲೀಸರು ಬಂಧಿಸಿ ಕೆಜಿಎಫ್​ ಬಾಲ ಮಂದಿರದಲ್ಲಿ ಇರಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com