ಯೂರಿಯಾ ಕೊರತೆಗೆ ಕೇಂದ್ರವೇ ಕಾರಣ; ಬಿಜೆಪಿ ಪ್ರತಿಭಟನೆ "ನಾಚಿಕೆಗೇಡು": ಸಿಎಂ ಸಿದ್ದರಾಮಯ್ಯ

ರಾಜ್ಯದ ಜನರ ತಲಾ ಆದಾಯ ಇಡೀ ದೇಶದಲ್ಲಿ ನಂಬರ್ ಒನ್ ಆಗಿದೆ. ರಾಜ್ಯದ ಈ ಆರ್ಥಿಕ ಸಾಧನೆಗೆ ನಾವು ಜಾರಿ ಮಾಡಿದ ಐದು ಗ್ಯಾರಂಟಿಗಳು ನೇರ ಕಾರಣವಾಗಿದೆ
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಉತ್ತಮ ಮಳೆಯ ನಂತರ ಬಿತ್ತನೆ ಚಟುವಟಿಕೆಗಳು ಭರದಿಂದ ಸಾಗುತ್ತಿರುವ ಸಮಯದಲ್ಲಿ ಕೇಂದ್ರ ಸರ್ಕಾರ "ರಾಜ್ಯದ ಯೂರಿಯಾ ಹಂಚಿಕೆಯನ್ನು ಕಡಿಮೆ ಮಾಡಿರುವುದರಿಂದ" ಕೊರತೆ ಉಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಆರೋಪಿಸಿದ್ದಾರೆ.

ಈ ಋತುವಿನಲ್ಲಿ ರಾಜ್ಯಕ್ಕೆ ಅನುಕೂಲಕರ ಮಳೆಯಾಗಿದೆ ಮತ್ತು ಬಿತ್ತನೆ ಚಟುವಟಿಕೆಗಳು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಸಿಎಂ ತಿಳಿಸಿದರು.

ಆದಾಗ್ಯೂ, ಯೂರಿಯಾ ಪೂರೈಕೆ ಕಡಿಮೆಯಾಗಿರುವುದು ಕೊರತೆಗೆ ಕಾರಣವಾಗಿದೆ. ಇದು ಈ ನಿರ್ಣಾಯಕ ಅವಧಿಯಲ್ಲಿ ರೈತರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು, ಸಂಪುಟ ಸಹೋದ್ಯೋಗಿಗಳು ಮತ್ತು ಶಾಸಕರೊಂದಿಗೆ ಆಡಳಿತ ಮತ್ತು ಅಭಿವೃದ್ಧಿ ವಿಷಯಗಳ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ, ಮುಖ್ಯಮಂತ್ರಿಗಳು ಈ ಅಭಿಪ್ರಾಯಗಳನ್ನು ಹಂಚಿಕೊಂಡಿದೆ.

CM Siddaramaiah
ಆಗಸ್ಟ್ 1ರಂದು ದೆಹಲಿಗೆ ಸಿಎಂ ಸಿದ್ದರಾಮಯ್ಯ: 'Bridge-to-Bengaluru' ಕಾರ್ಯಕ್ರಮದಲ್ಲಿ ಭಾಗಿ

ರಾಜ್ಯದ ಜನರ ತಲಾ ಆದಾಯ ಇಡೀ ದೇಶದಲ್ಲಿ ನಂಬರ್ ಒನ್ ಆಗಿದೆ. ಇದನ್ನು ನಾವೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಕ್ಷೇತ್ರದ ಮತದಾರರಿಗೆ ಅರ್ಥ ಮಾಡಿಸಬೇಕು. ರಾಜ್ಯದ ಈ ಆರ್ಥಿಕ ಸಾಧನೆಗೆ ನಾವು ಜಾರಿ ಮಾಡಿದ ಐದು ಗ್ಯಾರಂಟಿಗಳು ನೇರ ಕಾರಣವಾಗಿದೆ ಎನ್ನುವುದನ್ನು ರಾಜ್ಯದ ಜನತೆಗೆ ಅರ್ಥ ಮಾಡಿಸುವ ಕೆಲಸ ಇನ್ನಷ್ಟು ರಭಸವಾಗಿ ನಡೆಯಬೇಕು ಎಂದು ಹೇಳಿದ್ದಾರೆ.

ಕೇಂದ್ರದ ಅಸಹಕಾರ ಇದ್ದರೂ ನಮ್ಮ ರೈತರಿಗೆ ಸಮಸ್ಯೆ ಆಗಬಾರದು. ಮುಂಗಾರು ಹಂಗಾಮಿಗೆ 11.17 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ಬೇಕಾಗಿದೆ. ಏಪ್ರಿಲ್‌ ನಿಂದ ಜುಲೈ ವರೆಗೆ 6.81 ಲಕ್ಷ ಮೆಟ್ರಿಕ್‌ ಟನ್‌ ಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರ ಸರಬರಾಜು ಮಾಡಿದ್ದು ಕೇವಲ 5.17 ಲಕ್ಷ ಮೆಟ್ರಿಕ್‌ ಟನ್.‌ ಈ ವರ್ಷ 2 ಲಕ್ಷ ಹೆಕ್ಟೇರ್‌ ಮುಸುಕಿನ ಜೋಳ ಹೆಚ್ಚಾಗಿ ಬಿತ್ತನೆ ಮಾಡಲಾಗಿದೆ. ಹಾಗಾಗಿ, ಹೆಚ್ಚಿನ ಬೇಡಿಕೆ ಇದೆ. ಆದರೆ, ಯೂರಿಯಾ ಸರಬರಾಜನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. ನಮಗೆ ಬರಬೇಕಾದ ಯೂರಿಯಾ ಪ್ರಮಾಣದಲ್ಲಿ 1.66 ಲಕ್ಷ ಮೆಟ್ರಿಕ್‌ ಟನ್‌ ಕಡಿಮೆ ಆಗಿದೆ. ಆದರೂ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವುದು ರಾಜಕೀಯ ದುರುದ್ದೇಶದಿಂದ ಮತ್ತು ನಾಚಿಕೆಗೇಡಿನ ಸಂಗತಿ. ಇದನ್ನು ನೀವುಗಳು ಕ್ಷೇತ್ರದ ಜನತೆಗೆ ಅರ್ಥ ಮಾಡಿಸಬೇಕು. ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ನಮ್ಮ ರೈತರಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ.

CM Siddaramaiah
10-15 ದಿನಗಳಲ್ಲಿ ಕರ್ನಾಟಕಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆ: ಸಂಸದ ಬೊಮ್ಮಾಯಿ

ಹಿಂದಿನ ಬಿಜೆಪಿ ಸರ್ಕಾರದ ಲೋಪಗಳನ್ನು ನಾವು ಸರಿ ಮಾಡುವ ಜೊತೆಗೆ ಆರ್ಥಿಕತೆಗೆ ಚೈತನ್ಯ ನೀಡುತ್ತಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರ 2,70,695 ಕೋಟಿ ರೂಪಾಯಿ ಕಾಮಗಾರಿಗಳನ್ನು ತೆಗೆದುಕೊಂಡು ಅನುದಾನ ಒದಗಿಸದೆ ಟೆಂಡರ್‌ಗಳನ್ನು ಕರೆದಿದ್ದರು. ಅಲ್ಲದೆ, 1,66,426 ಕೋಟಿ ರೂ. ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಕಾಮಗಾರಿಗಳಿಗೆ ಅನುಮೋದನೆ ನೀಡಿ 72,000 ಕೋಟಿಗೂ ಹೆಚ್ಚು ಬಿಲ್ ಗಳನ್ನು ಬಿಟ್ಟು ಹೋಗಿದ್ದರು. ಇದನ್ನು ಜನರಿಗೆ ಅರ್ಥ ಮಾಡಿಸಬೇಕು ಎಂದರು.

ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗದ ವರದಿಯ ನೆಪದಲ್ಲಿ ಶೇ.23 ರಷ್ಟು ತೆರಿಗೆ ಪಾಲು ಕಡಿಮೆ ಮಾಡಿದೆ. ರಾಜ್ಯಕ್ಕೆ ಈ 5 ವರ್ಷಗಳಲ್ಲಿ 68,000 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ. ಇದನ್ನು ಕ್ಷೇತ್ರದ ಮತದಾರರಿಗೆ ಅರ್ಥ ಮಾಡಿಸುವ ಜೊತೆಗೆ ನೀವುಗಳೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಇವೆಲ್ಲದರ ನಡುವೆ, ನಾವು ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ 52,000 ಕೋಟಿ ಖರ್ಚು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳು ಹಾಗೂ ಸಾಮಾಜಿಕ ಪಿಂಚಣಿಗಳು, ಸಹಾಯಧನಗಳು, ಪ್ರೋತ್ಸಾಹ ಧನಗಳು ಹಾಗೂ ಫಲಾನುಭವಿಗಳಿಗೆ ನೇರವಾಗಿ ತಲುಪುವ ಯೋಜನೆಗಳಿಗಾಗಿ ಪ್ರತಿ ವರ್ಷ 1.12 ಲಕ್ಷ ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ.

ಜೊತೆಗೆ, ಈ ವರ್ಷ 1,24,440 ಕೋಟಿ ರೂ. ವೇತನ ಮತ್ತು ಪಿಂಚಣಿಗಳಿಗಾಗಿ ವಿನಿಯೋಗಿಸುತ್ತಿದ್ದೇವೆ. 7ನೇ ವೇತನ ಆಯೋಗವನ್ನು ಅನುಷ್ಠಾನ ಮಾಡಿದ್ದರಿಂದ ವೇತನ ಮತ್ತು ಪಿಂಚಣಿಗಳ ಮೊತ್ತ ಹೆಚ್ಚಾಗಿದೆ.

ನಮ್ಮ ಸರ್ಕಾರವು ಈ ವರ್ಷ ಬಂಡವಾಳ ವೆಚ್ಚಗಳಿಗಾಗಿ 83,200 ಕೋಟಿ ರೂ. ಖರ್ಚು ಮಾಡುತ್ತಿದೆ. ಇದು ನಮ್ಮ ಬಜೆಟ್‌ನ ಶೇ.20.03 ರಷ್ಟು. ಇದು ದೇಶದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿದೆ.

ಸಾಲ ಸೇವೆಗಾಗಿ ಹೆಚ್ಚುವರಿಯಾಗಿ 45,600 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com