
ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾಗಿರುವ ನಾಲ್ಕು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಒಂದರ ತೀರ್ಪನ್ನು ಬುಧವಾರ ವಿಶೇಷ ನ್ಯಾಯಾಲಯ ಆಗಸ್ಟ್ 1ಕ್ಕೆ ಮುಂದೂಡಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮನೆಕೆಲಸದ ಮಹಿಳೆ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂತೋಷ ಗಜಾನನ ಭಟ್ ಅವರು ಆದೇಶವನ್ನು ಇಂದಿಗೆ ಕಾಯ್ದಿರಿಸಿದ್ದರು.
ಇಂದು ತೀರ್ಪು ಪ್ರಕಟಿಸುವ ಮುನ್ನ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು, ಎರಡೂ ಕಡೆಯ ವಕೀಲರಿಂದ ಕೆಲವು ಸ್ಪಷ್ಟೀಕರಣ ಕೇಳಿದರು. ಗೂಗಲ್ ಮ್ಯಾಪ್ ಅನ್ನು ಸಾಕ್ಷಿಯಾಗಿ ಪರಿಗಣಿಸಿಸಬಹುದೇ? ಸ್ಯಾಮ್ಸಂಗ್ ಜೆ 4 ಮೊಬೈಲ್ ಸೀಜ್ ಮಾಡಿರುವ ಬಗ್ಗೆಯೂ ಮಾಹಿತಿ ಕೇಳಿ ತೀರ್ಪು ಮುಂದೂಡಿದರು.
ಸ್ಪಷ್ಟೀಕರಣ ಅಗತ್ಯವಿರುವುದರಿಂದ ಇಂದು ತೀರ್ಪು ಪ್ರಕಟಿಸಲು ಸಾಧ್ಯವಿಲ್ಲ. ಆಗಸ್ಟ್ 1ಕ್ಕೆ ಆದೇಶ ಪ್ರಕಟಿಸವುದಾಗಿ ನ್ಯಾಯಾಧೀಶರು ಹೇಳಿದರು.
ಪ್ರಜ್ವಲ್ ರೇವಣ್ಣ ಅವರ ತೋಟದ ಮನೆಯಲ್ಲಿ 47 ವರ್ಷದ ಮನೆಕೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪವಿದೆ. ಈ ಸಂಬಂಧ ಸಂತ್ರಸ್ತೆ ಏಪ್ರಿಲ್ 28, 2024 ರಂದು ಹಾಸನದ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶುಕ್ರವಾರ ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರವಾಗಲಿದ್ದು, ಒಂದು ವೇಳೆ ಕೋರ್ಟ್, ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದರೆ ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದಾರೆ.
Advertisement