
ಮಂಗಳೂರು: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ಗುರುತು ಪಡಿಸಿದ ಸ್ಥಳಗಳ ಪೈಕಿ ಮೊದಲನೇ ಗುರುತಿನ ಸ್ಥಳವನ್ನು ಅಗೆಯುವ ವೇಳೆ ಸೈಟ್ ಸಂಖ್ಯೆ 1ರಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ)ವು ಮಹತ್ವದ ಸಾಕ್ಷ್ಯಗಳನ್ನು ಪತ್ತೆ ಹಚ್ಚಿದೆ ಎಂದು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಎಸ್ಐಟಿಯ ಕಾರ್ಯಾಚರಣೆಯು ಪ್ರಕರಣದಲ್ಲಿ ಹೊಸ ಬೆಳವಣಿಗೆಗೆ ದಾರಿ ತೆರೆದಿದೆ. ನಿನ್ನೆ ಮಂಗಳವಾರದ ಕಾರ್ಯಾಚರಣೆಯ ವೇಳೆ ಸುಮಾರು 2.5 ಅಡಿ ಆಳದಲ್ಲಿ ಕೆಂಪು ಬಣ್ಣದ ರವಿಕೆ, PAN ಕಾರ್ಡ್ ಹಾಗೂ ATM ಕಾರ್ಡ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಎಸ್‌ಐಟಿಯು ಈ ಬೆಳವಣಿಗೆಯ ನಂತರ ತಕ್ಷಣ ಸ್ಥಳದ 10 ಅಡಿ ಆಳದವರೆಗೆ ಉತ್ಖನನ ಕಾರ್ಯಾಚರಣೆಯನ್ನು ಮುಂದುವರಿಸುವ ನಿರ್ಧಾರ ತೆಗೆದುಕೊಂಡಿದ್ದು, ಇದು ಅವರ ವೃತ್ತಿಪರ ಬದ್ಧತೆಯನ್ನು ತೋರಿಸುತ್ತದೆ. ಈ ಕಾರ್ಯವು ಶ್ರಮದಾಯಕವಾದರೂ, ಯಾವುದೇ ಸಾಕ್ಷ್ಯವನ್ನು ಕಡೆಗಣಿಸದೆ ಸಮಗ್ರವಾಗಿ ಪರಿಶೀಲಿಸುವ ದೃಢ ಸಂಕಲ್ಪ ಮಾಡಿರುವ ಎಸ್ಐಟಿಯ ಕಾರ್ಯವೈಖರಿಯು ಶ್ಲಾಘನೀಯ ಎಂದು ವಕೀಲ ಮಂಜುನಾಥ್ ಎನ್ ಹೇಳಿದ್ದಾರೆ.
ಪತ್ತೆಯಾಗಿರುವ PAN ಕಾರ್ಡ್ ಮತ್ತು ATM ಕಾರ್ಡ್ ಗಳಲ್ಲಿ ಒಂದರ ಮೇಲೆ ಪುರುಷನ ಹೆಸರು ಮತ್ತು ಇನ್ನೊಂದರಲ್ಲಿ 'ಲಕ್ಷ್ಮಿ' ಎಂಬ ಹೆಸರಿರುವುದು ಕಂಡುಬಂದಿದೆ. ಈ ಸುಳಿವುಗಳು ವಿಚಾರಣೆಗೆ ಹೊಸ ದಿಕ್ಕು ನೀಡಬಹುದು. ಎಸ್ ಐ ಟಿ ಅಧಿಕಾರಿಗಳು ಈ ಪ್ರಮುಖ ಸುಳಿವಿನ ಬೆನ್ನತ್ತಿ ಹೋಗುತ್ತಾರೆ ಎಂಬ ಭರವಸೆಯಿದೆ ಎಂದು ಅವರು ಹೇಳಿದ್ದಾರೆ.
ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ನೀಡಿದ ವ್ಯಕ್ತಿ ತೋರಿಸಿದ ಸ್ಥಳವನ್ನು ಅಗೆಯುವಾಗ ಈ ಸಾಕ್ಷ್ಯಗಳು ಸಿಕ್ಕಿವೆ. ಈ ಮೂಲಕ ಎಸ್‌ಐಟಿ ಕಾರ್ಯಾಚರಣೆಯಿಂದ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ಎಸ್‌ಐಟಿ ಕಾರ್ಯವೈಖರಿಗೆ ಶ್ಲಾಘನೆ ಎಂದಿದ್ದಾರೆ.
ಇದುವರೆಗೆ ಎಸ್ಐಟಿಯು ಪ್ರದರ್ಶಿಸಿರುವ ಗಂಭೀರತೆ, ಶಿಸ್ತು ಮತ್ತು ಕಾರ್ಯದಕ್ಷತೆ ನಮಗೆ ಭರವಸೆಯನ್ನು ಹುಟ್ಟುಹಾಕಿದೆ. ಮುಂದಿನ ಸ್ಥಳಗಳ ಪರಿಶೀಲನೆಯ ವೇಳೆ ನಾವು ಅವರ ಕೆಲಸಗಳಲ್ಲಿ ಸಂಪೂರ್ಣ ನಂಬಿಕೆಯನ್ನು ಇಡುತ್ತೇವೆ " ಎಂದು ವಕೀಲ ಮಂಜುನಾಥ್ ಹೇಳಿದ್ದಾರೆ.
Advertisement