
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಿರುವ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ದೇಸಾಯಿ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವರದಿ ಸ್ವೀಕರಿಸಿದರು. ಮೂಡಾ ನಿವೇಶನ ಹಗರಣ ಕುರಿತು ರಾಜ್ಯ ಸರ್ಕಾರ 2024ರ ಜುಲೈನಲ್ಲಿ ನಿವೃತ್ತ ನ್ಯಾ.ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗ ರಚಿಸಿ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ವರದಿಯ ವಿವರಗಳನ್ನು ಸಾರ್ವಜನಿಕವಾಗಿ ಇನ್ನೂ ಬಹಿರಂಗಗೊಳಿಸಿಲ್ಲ.
ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧವೇ ಆರೋಪ ಕೇಳಿಬಂದಿತ್ತು. ಸಿಎಂ ಪತ್ನಿ ಪಾರ್ವತಿ ಮೂಡಾದಿಂದ ಪರ್ಯಾಯ ನಿವೇಶನ ಪಡೆದ ಫಲಾನುಭವಿಗಳಲ್ಲಿಒಬ್ಬರಾಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಕೋರ್ಟ್ ಮೊರೆ ಹೋಗಿದ್ದರು.
ಈ ಪ್ರಕರಣವನ್ನು ಸಿದ್ದರಾಮಯ್ಯನವರ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಅಸ್ತ್ರ ಮಾಡಿಕೊಂಡು ತೀವ್ರ ಹೋರಾಟ ನಡೆಸಿದ್ದವು.
ಪ್ರತಿಪಕ್ಷಗಳ ಆರೋಪಗಳನ್ನು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ, ತನ್ನ ಪತ್ನಿ ಒಡೆತನದಲ್ಲಿದ್ದ ನಾಲ್ಕು ಎಕರೆ ಜಮೀನನ್ನು ಅಕ್ರಮವಾಗಿ ತೆಗೆದುಕೊಂಡಿದ್ದು, ಆಕೆಯ ಒಪ್ಪಿಗೆ ಇಲ್ಲದೆ ಲೇಔಟ್ ಅಭಿವೃದ್ಧಿ ಮಾಡಿದ್ದ ಮೂಡಾ ಪರಿಹಾರವಾಗಿ 14 ಪರ್ಯಾಯ ಪ್ಲಾಟ್ ಗಳನ್ನು ನೀಡಿರುವುದಾಗಿ ಹೇಳಿದ್ದರು. ಅಲ್ಲದೇ 14 ನಿವೇಶನಗಳನ್ನು ವಾಪಸ್ ಮಾಡಿದ್ದರು.
Advertisement