ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಮತ್ತು ಶೀಘ್ರವಾಗಿ ನ್ಯಾಯ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯಕ್ಕೆ ಅನುಕೂಲವಾಗುವಂತೆ ಉಪಬಂಧ ಕಲ್ಪಿಸಲು ಸಿವಿಲ್ ಪ್ರಕ್ರಿಯಾ ಸಂಹಿತೆ 1908ಕ್ಕೆ ತಿದ್ದುಪಡಿ ಮಾಡುವ “ಸಿವಿಲ್ ಪ್ರಕ್ರಿಯಾ ಸಂಹಿತೆ ಅಧಿನಿಯಮ, 2024” ಕ್ಕೆ ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ. ತಿದ್ದುಪಡಿ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಅನುಮೋದಿಸಲಾಗಿತ್ತು. ರಾಜ್ಯಪಾಲರು ಇದನ್ನು ಸಂವಿಧಾನದ ಅನುಚ್ಛೇದ 200 ಮತ್ತು 254ರ ಅಡಿ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯ್ದಿರಿಸಿದ್ದರು. ಈಗ ಅಧಿನಿಯಮಕ್ಕೆ ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸಿದ್ದು, ರಾಜ್ಯ ಗೆಜೆಟ್‌ನಲ್ಲಿ ಪ್ರಕಟವಾಗಿದೆ. ಕೋರ್ಟ್‌ಗಳಲ್ಲಿ ಸಾಕಷ್ಟು ಸಂಖ್ಯೆ ಯಲ್ಲಿ ಸಿವಿಲ್ ವ್ಯಾಜ್ಯಗಳು ವಿಲೇವಾರಿಗೆ ಬಾಕಿ ಇವೆ. ಹಾಗಾಗಿ ಅವುಗಳ ತ್ವರಿತ ವಿಲೇವಾರಿಗಾಗಿ ರಾಜ್ಯ ಸರಕಾರ ಸಿವಿಲ್ ಪ್ರಕ್ರಿಯಾ ಸಂಹಿತೆ ಮಸೂದೆಗೆ ತಿದ್ದುಪಡಿ ಮಾಡಿತ್ತು.
ಜನರ ತೀವ್ರ ವಿರೋಧ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ನಿಷೇಧಾಜ್ಞೆ ನಡುವೆಯೂ ರೈತರು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆ ರೈತರ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶಾಸಕರ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳುವವರೆಗೂ ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಪ್ರತಿಭಟನಾಕಾರರು ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದ್ದಾರೆ. ಇದರೊಂದಿಗೆ ಪ್ರತಿಭಟನೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಈ ನಡುವೆ ಸರ್ಕಾರದ ನಿರ್ಧಾರವನ್ನು ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.
ದ್ವೇಷ ಭಾಷಣ-ಪ್ರಚೋದನಾಕಾರಿ ಪೋಸ್ಟ್, ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಶೀಘ್ರದಲ್ಲೇ ಕಠಿಣ ಕಾನೂನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು (ಡಿಸಿಗಳು) ಮತ್ತು ಎಲ್ಲಾ ಜಿಲ್ಲಾ ಪಂಚಾಯತ್‌ಗಳ ಸಿಇಒಗಳೊಂದಿಗೆ ಎರಡು ದಿನಗಳ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ದ್ವೇಷ ಭಾಷಣ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದೇನೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಕಠಿಣ ಕಾನೂನು ಜಾರಿಗೆ ತರಲಾಗುವುದು. ಈ ಬೆಳವಣಿಗೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಹೇಳಿದರು.
ದ್ವೇಷ ಭಾಷಣ ಮಾಡುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ನಿರ್ದಯ ಕ್ರಮ ಕೈಗೊಳ್ಳಬೇಕು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ತಿಳಿಸಿದರು.
ಮಂಡ್ಯ ಪೊಲೀಸರ ಅಮಾನವೀಯ ವರ್ತನೆಯಿಂದ 3 ವರ್ಷದ ಮಗು ಸಾವಿನ್ನಪ್ಪಿದ ದುರ್ಘಟನೆ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ, ವಾಹನ ತಪಾಸಣೆಗೆ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಹೊಸ ನಿಯಮಗಳನ್ನು ಬಿಡುಗಡೆ ಮಾಡಿದ್ದು, ಮಂಡ್ಯದಲ್ಲಿ ಮಗು ಸಾವು ಹಾಗೂ ದಾವಣಗೆರೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಕ್ಯಾಂಟರ್ ಚಾಲಕ ಡಿಕ್ಕಿ ಹೊಡೆದ ಪ್ರಕರಣವನ್ನು ಉಲ್ಲೇಖಿಸಿ ಆದೇಶ ಹೊರಡಿಸಿರುವ ಅವರು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುವ ವೇಳೆ ರಸ್ತೆ ಸುರಕ್ಷತಾ ಕ್ರಮಗಳನ್ನು ಗಮನದಲ್ಲಿರಿಸಿಕೊಳ್ಳುತ್ತಿಲ್ಲ. ದಾಖಲೆ ಪರೀಕ್ಷಿಸಲು ಸಕಾರಣವಿಲ್ಲದೇ ವಾಹನಗಳನ್ನು ತಡೆದು ತಪಾಸಣೆಗೊಳಪಡಿಸಬಾರದು. ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಮಾತ್ರವೇ ಅಂತಹ ವಾಹನಗಳನ್ನು ನಿಲ್ಲಿಸಿ ಪ್ರಕರಣಗಳನ್ನು ದಾಖಲಿಸಬೇಕು. ಹೆದ್ದಾರಿಗಳಲ್ಲಿ ಜಿಗ್ ಜಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯಬಾರದು. ರಸ್ತೆಯಲ್ಲಿ ದಿಢೀರನೇ ಅಡ್ಡಬಂದು ವಾಹನ ನಿಲ್ಲಿಸುವಂತೆ ಹೇಳಬಾರದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್‌ಗೆ ಬಿಡಿಎ ಆಯುಕ್ತ ಹುದ್ದೆಯನ್ನು ಸಮಪ್ರಭಾರ ಜವಾಬ್ದಾರಿವಹಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಇದರಂತೆ ಬಿಡಿಎ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಮಣಿವಣ್ಣನ್, ನಾವು ಒಟ್ಟಾಗಿ ನಾವೀನ್ಯತೆ, ಸುಸ್ಥಿರತೆ ಮತ್ತು ಸ್ಮಾರ್ಟ್ ಸಿಟಿ ಬೆಳವಣಿಗೆಯ ನಗರವಾದ ಬ್ರ್ಯಾಂಡ್ ಬೆಂಗಳೂರನ್ನು ನಿರ್ಮಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಬಿಡಿಎ ಆಯುಕ್ತ ಎನ್.ಜಯರಾಮ್ ಮೇ.31 ರಂದು ನಿವೃತ್ತಿಗೊಂಡಿದ್ದರು.
Advertisement