ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ಸಿಎಂ ತಗಾದೆ; ರಾಜ್ಯದ ಹಿತರಕ್ಷಣೆಗೆ ಮುಂದಾಗುವಂತೆ ಕೇಂದ್ರ ಸಚಿವರು, ಸಂಸದರಿಗೆ ಮನವಿ: ಡಿಕೆಶಿ

ಈ ಯೋಜನೆ ನ್ಯಾಯಾಧಿಕರಣದಲ್ಲಿ ನಮಗೆ ಸಿಕ್ಕಿರುವ ಹಕ್ಕು. ಹೀಗಾಗಿ ನಮ್ಮ ಸಿಎಂ ಸಹ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ.
DK Shivakumar
ಡಿ.ಕೆ. ಶಿವಕುಮಾರ್
Updated on

ಬೆಂಗಳೂರು: ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನಂತೆ ನಮ್ಮ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀಟರ್ ಗೆ ಹೆಚ್ಚಿಸಬೇಕಿದೆ. ನ್ಯಾಯಧೀಕರಣದ ತೀರ್ಪು ಬಂದಾಗ ಸುಮ್ಮನಿದ್ದ ಮಹಾರಾಷ್ಟ್ರ ಸಿಎಂ ಈಗ ಹಠಾತ್ತನೇ ಕರ್ನಾಟಕದ ಸಿಎಂ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿರುವುದು ತೀವ್ರ ಆಶ್ಚರ್ಯ ತಂದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸೋಮವಾರ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ನಮ್ಮ ಸಿಎಂ ಸಿದ್ದರಾಮಯ್ಯ ಅವರಿಗೆ ಮೇ 9 ರಂದು ಪತ್ರ ಬರೆದಿದ್ದಾರೆ. ಆಣೆಕಟ್ಟೆ ಎತ್ತರ ಹೆಚ್ಚಳ ಮಾಡಿದರೆ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳು ಪ್ರವಾಹ ಸಮಸ್ಯೆ ಎದುರಿಸುತ್ತವೆ. ಹೀಗಾಗಿ ಈ ತೀರ್ಮಾನ ಮರುಪರಿಶೀಲಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ" ಎಂದರು.

ಈ ಹಿನ್ನೆಲೆಯಲ್ಲಿ, ಯೋಜನೆ ಜಾರಿ ಮಾಡಿ ರಾಜ್ಯ ಹಾಗೂ ರೈತರ ಹಿತ ಕಾಯಲು ಎಲ್ಲಾ ಸಂಸದರು, ಕೇಂದ್ರ ಸಚಿವರು ಸಹಕರಿಸಬೇಕು ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದರು.

"ಮಹಾರಾಷ್ಟ್ರ ಸಿಎಂ ಅವರ ಈ ಪತ್ರ ನಮಗೆ ಆಘಾತ ತಂದಿದೆ. ಕಾರಣ ಇದುವರೆಗೂ ಈ ಯೋಜನೆ ವಿಚಾರವಾಗಿ ಮಹಾರಾಷ್ಟ್ರ ಎಂದೂ ಆಕ್ಷೇಪ ಸಲ್ಲಿಸಿರಲಿಲ್ಲ. 2010 ರ ತೀರ್ಪಿನ ಬಗ್ಗೆ ಮಹಾರಾಷ್ಟ್ರ ಎಲ್ಲೂ ಪ್ರಶ್ನೆ ಎತ್ತಿರಲಿಲ್ಲ. ಈ ಯೋಜನೆ ಜಾರಿ ಮಾಡಲಿ ಎಂದು ಮಹಾರಾಷ್ಟ್ರ ಕೂಡ ಅಫಿಡವಿಟ್ ಸಲ್ಲಿಸಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಈ ಪತ್ರ ಬರೆದಿದ್ದಾರೆ" ಎಂದು ತಿಳಿಸಿದರು. "ಈ ಯೋಜನೆ ನ್ಯಾಯಾಧಿಕರಣದಲ್ಲಿ ನಮಗೆ ಸಿಕ್ಕಿರುವ ಹಕ್ಕು. ಹೀಗಾಗಿ ನಮ್ಮ ಸಿಎಂ ಸಹ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರು, ಕೇಂದ್ರದ ಸಚಿವರು ಈ ವಿಚಾರವಾಗಿ ನಮಗೆ ಸಹಕಾರ ನೀಡಬೇಕು ಎಂದು ಕೈ ಮುಗಿದು ಮನವಿ ಮಾಡುತ್ತೇನೆ" ಎಂದು ತಿಳಿಸಿದರು.

DK Shivakumar
ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀಟರ್ ಗೆ ಹೆಚ್ಚಿಸಲು ಸರ್ಕಾರ ಬದ್ಧ: ಡಿ.ಕೆ ಶಿವಕುಮಾರ್

"ಕೇಂದ್ರ ಸಚಿವ ಸೋಮಣ್ಣ ಅವರು ಕೇಂದ್ರ ಜಲಶಕ್ತಿ ಸಚಿವಾಲಯದ ಭಾಗ. ಆಲಮಟ್ಟಿ ಯೋಜನೆ ನಮ್ಮ ರಾಜ್ಯದ ಹಿತ. ನಮಗೆ ನೆರೆ ರಾಜ್ಯಗಳ ಜತೆ ತಿಕ್ಕಾಟ ಇಷ್ಟವಿಲ್ಲ. ಈ ಯೋಜನೆ ತಡವಾಗುತ್ತಿರುವುದರಿಂದ ಯೋಜನೆ ವೆಚ್ಚ ವಿಪರೀತ ಏರಿಕೆಯಾಗುತ್ತಿದೆ. ಯೋಜನೆ ಭೂಸ್ವಾಧೀನಕ್ಕೆ 1 ಲಕ್ಷ ಕೋಟಿ ರೂಪಾಯಿ ಬೇಕಾಗಿದೆ. ನಮ್ಮ ಪಾಲಿನ ನೀರು ಬಳಸಲು ಈ ಯೋಜನೆ ಮುಖ್ಯ" ಎಂದು ಹೇಳಿದರು.

ಅವರ ರಾಜ್ಯದಲ್ಲಿ ಪ್ರವಾಹ ಎದುರಾದರೆ ಅದನ್ನು ಅವರು ಆಂತರಿಕವಾಗಿ ಸರಿಪಡಿಸಿಕೊಳ್ಳಲಿ. ನಾವು ಈ ವಿಚಾರವಾಗಿ ಕೇಂದ್ರ ಸಚಿವರು ಹಾಗೂ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಒತ್ತಡ ಹಾಕಬೇಕಿದೆ. ಈ ವಿಚಾರದಲ್ಲಿ ನಾವು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. 2013ರಿಂದ ಈ ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಆಗಬೇಕು ಎಂದು ಕಾಯುತ್ತಿದ್ದೇವೆ. ಇನ್ನು ಎಷ್ಟು ದಿನ ಕಾಯಬೇಕು?" ಎಂದು ಪ್ರಶ್ನಿಸಿದರು.

"ನಮ್ಮ ರೈತರ ಹಿತ ಕಾಯಲು ನೀವು ಯಾವಾಗ ಎಲ್ಲಿಗೆ ಕರೆಯುತ್ತೀರೋ ಅಲ್ಲಿಗೆ ಬರಲು ನಮ್ಮ ಸರ್ಕಾರ ಸಿದ್ಧವಿದೆ. ಮಹಾರಾಷ್ಟ್ರ ಸಿಎಂ ಹಾಗೂ ಅದಕ್ಕೆ ನಮ್ಮ ಸಿಎಂ ಬರೆಯುವ ಪತ್ರವನ್ನು ಎಲ್ಲಾ ಸಂಸದರಿಗೆ ರವಾನಿಸುತ್ತೇವೆ.

ನ್ಯಾಯಾಧಿಕರಣ ತೀರ್ಪಿನ ಅನ್ವಯ ನಮ್ಮ ಪಾಲಿನ ನೀರನ್ನು ಪಡೆಯಲು ಆಲಮಟ್ಟಿ ಅಣೆಕಟ್ಟನ್ನು 524 ಮೀಟರ್ ಗೆ ಎತ್ತರಿಸುವ ಯೋಜನೆ ವಿಚಾರವಾಗಿ ನಾನು ಹಾಗೂ ಮುಖ್ಯಮಂತ್ರಿಗಳು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೆವು. ಈ ಬಗ್ಗೆ ಸಭೆ ಕರೆದು ಚರ್ಚೆ ಮಾಡಿ ಅಧಿಸೂಚನೆ ಹೊರಡಿಸಿ ಎಂದು ಮನವಿ ಮಾಡಿದ್ದೆವು" ಎಂದರು.

"ಕೇಂದ್ರ ಸಚಿವರು ನಮ್ಮ ಮನವಿ ಪರಿಗಣಿಸಿ ಸಭೆಗೆ ದಿನಾಂಕ ನಿಗದಿ ಮಾಡಿದ್ದರು. ಹೀಗಾಗಿ ನಾನು ಸಚಿವರು, ಕಾನೂನು ತಜ್ಞರು ಹಾಗೂ ಆ ಭಾಗದ ಶಾಸಕರ ಜತೆ ಆಂತರಿಕ ಸಭೆ ಮಾಡಿ ಸಲಹೆ ಪಡೆದಿದ್ದೆ. ಸಭೆಗೆ ತೆರಳುವಾಗ ಈ ಸಭೆ ಮುಂದೂಡಲಾಗಿದೆ ಎಂದು ಸಂದೇಶ ಬಂದಿತು. ಯುದ್ಧದ ವಾತಾವರಣ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿರಬಹುದು ಎಂದು ಭಾವಿಸಿದ್ದೆ" ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com