
ಬೆಂಗಳೂರು: ವಿಶ್ವದಲ್ಲೇ ಅತಿ ಎತ್ತರದ ವಿಷ್ಣುವಿನ 108 ಅಡಿ ಎತ್ತರದ ಏಕಶಿಲಾ ಪ್ರತಿಮೆಯನ್ನು ಇಂದು ಸೋಮವಾರ ಈಜಿಪುರದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನೆರವೇರುತ್ತಿದೆ. ತಮಿಳುನಾಡಿನ ತಿರುವಣ್ಣಾಮಲೈನಿಂದ ಗಣಿಗಾರಿಕೆ ಮಾಡಿದ 420 ಟನ್ ತೂಕದ ಏಕಶಿಲಾ ಕಲ್ಲನ್ನು 2019 ರಲ್ಲಿ 240 ಚಕ್ರಗಳ ಟ್ರಕ್‌ನಲ್ಲಿ ಆರು ತಿಂಗಳ ಅವಧಿಯಲ್ಲಿ ನಗರಕ್ಕೆ ತರಲಾಗಿತ್ತು.
ಏಕಶಿಲಾ ಪ್ರತಿಮೆಯ ಹಿಂದಿನ ವ್ಯಕ್ತಿ ನಿವೃತ್ತ ಸರ್ಕಾರಿ ವೈದ್ಯ ಡಾ. ಬಿ. ಸದಾನಂದ, ಅವರು 2010 ರಲ್ಲಿ ಈ ಕೆಲಸ ಆರಂಭಿಸಿದ್ದರು. ಈ ಪ್ರತಿಮೆಯು ಆಧ್ಯಾತ್ಮಿಕ ಏಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿ ಕಾರ್ಯನಿರ್ವಹಿಸಬೇಕೆಂದು ವೈದ್ಯರು ಬಯಸುತ್ತಾರೆ.
ಈ ಅವತಾರದಲ್ಲಿ ಅತ್ಯಂತ ಎತ್ತರ ಪ್ರತಿಮೆ ಎಂದು ಹೇಳಲಾಗುವ ವಿಶ್ವರೂಪ ಪ್ರತಿಮೆಯ ಕೆಲಸ 2010 ರಲ್ಲಿ ಪ್ರಾರಂಭವಾಯಿತು, ಮೊದಲ ಹಂತದಲ್ಲಿ ನಿರ್ಮಾಣ ಪೂರ್ವ ಕೆಲಸ ಮತ್ತು ಮುಖ್ಯ ದೇವರು ಮತ್ತು ಆದಿಶೇಷನ ಶಿಲ್ಪಕಲೆ ಸೇರಿದೆ.
ಶಿಲ್ಪಕಲೆಯ ಕೆಲಸ ಪೂರ್ಣಗೊಳಿಸುವಿಕೆ, ಹೊಳಪು ನೀಡುವಿಕೆ, ಕ್ರೇನ್ ಕೆಲಸ, ಪ್ರತಿಮೆಯ ಕಟ್ಟಡ ಚೌಕಟ್ಟು ಮತ್ತು ಇತರ ಸಿವಿಲ್ ಕೆಲಸಗಳನ್ನು ಒಳಗೊಂಡಂತೆ ಪ್ರತಿಮೆಯನ್ನು ಪೂರ್ಣಗೊಳಿಸಲು ಒಟ್ಟು 2.60 ಕೋಟಿ ರೂಪಾಯಿ ವೆಚ್ಚವಾಗಿದೆ.
ಈಜಿಪುರದಲ್ಲಿ ಭಕ್ತರು ವಿಷ್ಣುವಿನ ವಿರಾಟ ಸ್ವರೂಪವನ್ನು ವೀಕ್ಷಿಸಲು ಧಾವಿಸುತ್ತಿದ್ದಾರೆ. ಮೊನ್ನೆ ಶನಿವಾರದಿಂದ ಹೋಮ- ಹವನಗಳು ಆರಂಭಗೊಂಡವು. ಮುಖ್ಯ ಪ್ರಾಣ ಪ್ರತಿಷ್ಠಾ ಹೋಮ ಮತ್ತು ಮಹಾಕುಂಬಾಭಿಷೇಕ (ಪವಿತ್ರೀಕರಣ ಸಮಾರಂಭ) ಇಂದು ನಡೆಯುತ್ತಿದೆ. ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ಮತ್ತು ಮೈಸೂರಿನ ಪರಕಾಲ ಮಠದ ಅಭಿನವ ವಾಗೀಶ್ ಅವರು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.
ಈ ಶಿಲ್ಪಕಲೆಯು ಈ ರೀತಿ ಕೆತ್ತನೆಯಾಗಿ ಪ್ರಾಣಪ್ರತಿಷ್ಠೆಯಾಗುತ್ತಿರುವುದು ಮೊದಲನೆಯದು ಮತ್ತು ಇದುವರೆಗೆ ಸ್ಥಾಪಿಸಲಾದ ಇತರ ರೀತಿಯ ವಿಷ್ಣು ಪ್ರತಿಮೆಗಳಿಗಿಂತ ಭಿನ್ನವಾಗಿದೆ. ಪರಮಾತ್ಮನ ‘ಶಿವ ಕೇಶವ ಸ್ವರೂಪಂ’ ಮಹಾ ವಿಷ್ಣು, ಶಿವ, ಬ್ರಹ್ಮ, ಸ್ಕಂದ, ವಿನಾಯಕ, ನರಸಿಂಹ, ಆಂಜನೇಯ, ಗರುಡ, ಅಗ್ನಿ ಮತ್ತು ಋಷಿ ಮುನಿಗಳನ್ನು ಪ್ರತಿನಿಧಿಸುವ ಹಲವಾರು ತೋಳುಗಳು ಮತ್ತು ತಲೆಗಳನ್ನು ಹೊಂದಿದೆ ಎಂದು ಪ್ರಾಜೆಕ್ಟ್ ನಲ್ಲಿ ಭಾಗಿಯಾಗಿದ್ದವರು ಹೇಳಿದರು.
ಕೋದಂಡ ರಾಮಸ್ವಾಮಿ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಈ ಯೋಜನೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಿತ್ತು. ಈ ಪ್ರತಿಮೆ ಹಿಂದೂ ಧರ್ಮದ ಅನುಯಾಯಿಗಳಲ್ಲಿ ಏಕತೆಯನ್ನು ಸೃಷ್ಟಿಸಲು ಸಂಕೇತವಾಗಿದೆ ಎಂದರು.
Advertisement