ಎಲ್ಲಾ ರಂಗದ ಸಾಧಕರಿಗೆ ರಾಜ್ಯಮಟ್ಟದ ಕೆಂಪೇಗೌಡ ಪ್ರಶಸ್ತಿ; ಜೂನ್‌ 27 ರಂದು ಪ್ರಾಧಿಕಾರದ ಕಟ್ಟಡಕ್ಕೆ ಶಂಕುಸ್ಥಾಪನೆ; ದಸರಾಗೆ ಸ್ತಬ್ಧಚಿತ್ರ

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಮ್ಮನಹಳ್ಳಿ ಬಳಿ 5 ಎಕರೆ ಜಾಗವನ್ನು ನಿಗದಿ ಮಾಡಿದ್ದು, ಜೂನ್ 27ರಂದು ಕೆಂಪೇಗೌಡ ಜಯಂತಿ ಅಂಗವಾಗಿ ಅಂದೇ ಭೂಮಿ ಪೂಜೆ ಮಾಡಲು ತೀರ್ಮಾನಿಸಿದ್ದೇವೆ.
Dk Shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ಇದೇ ತಿಂಗಳು 27ರಂದು ಕೆಂಪೇಗೌಡ ಜಯಂತಿ ದಿನದಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಸೋಮವಾರ ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪೂರ್ವಭಾವಿ ಸಭೆ ನಡೆಸಿ, ನಂತರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ನಾಡಪ್ರಭು ಕೆಂಪೇಗೌಡರ ಜನ್ಮದಿನ ಆಚರಣೆ ವಿಚಾರವಾಗಿ ಇಂದು ಪೂರ್ವಭಾವಿ ಸಭೆ ಮಾಡಿದ್ದೇವೆ. ಈ ಸಭೆಯಲ್ಲಿ ಸುಮಾರು 150 ಪ್ರಮುಖ ನಾಯಕರು ಭಾಗವಹಿಸಿದ್ದರು. 60-70 ಜನ ಅನೇಕ ಸಲಹೆಗಳನ್ನು ನೀಡಿದ್ದಾರೆ ಎಂದರು.

ಸಿದ್ದರಾಮಯ್ಯ ಅವರ ಕಳೆದ ಸರ್ಕಾರದಲ್ಲಿ ಪ್ರತಿ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನ ಮಾಡಲಾಯಿತು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಮ್ಮನಹಳ್ಳಿ ಬಳಿ 5 ಎಕರೆ ಜಾಗವನ್ನು ನಿಗದಿ ಮಾಡಿದ್ದು, ಜೂನ್ 27ರಂದು ಕೆಂಪೇಗೌಡ ಜಯಂತಿ ಅಂಗವಾಗಿ ಅಂದೇ ಭೂಮಿ ಪೂಜೆ ಮಾಡಲು ತೀರ್ಮಾನಿಸಿದ್ದೇವೆ. ಈ ಕಟ್ಟಡದ ವಾಸ್ತುಶಿಲ್ಪಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಪ್ರತಿ ವರ್ಷದಂತೆ ಈ ವರ್ಷ ಕೆಂಪೇಗೌಡರ ಗೋಪುರಗಳಿಂದ ಜ್ಯೋತಿ ಬರಲಿದ್ದು, ಪ್ರತಿ ಗೋಪುರಕ್ಕೂ ಒಬ್ಬರು ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. 27ರಂದು ಬೆಳಗ್ಗೆ ಬಾಬು ಜಗಜೀವನ್ ರಾಮ್ ಅವರ ಭವನದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಆಚರಿಸಲಾಗುವುದು ಎಂದರು.

Dk Shivakumar
ಸ್ಕೈಡೆಕ್ ಯೋಜನೆ ಘೋಷಣೆ ನಂತರ ನಾಡಪ್ರಭು ಕೆಂಪೇಗೌಡ ಲೇಔಟ್ ನಿವೇಶನ ಹಂಚಿಕೆದಾರರಲ್ಲಿ ಹೊಸ ಭರವಸೆ!

27 ರಂದು ಸಂಜೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾಡಬೇಕಿದ್ದು, ಇದನ್ನು ವಾರ್ಡ್ ಮಟ್ಟಕ್ಕೆ ಸೀಮಿತಗೊಳಿಸುವುದು ಬೇಡ. ರಾಜ್ಯೋತ್ಸವ ಪ್ರಶಸ್ತಿಯಂತೆ ಎಲ್ಲಾ ವರ್ಗಕ್ಕೆ ಕ್ರೀಡೆ, ಸಾಹಿತ್ಯ, ಕಲೆ, ಪತ್ರಿಕೋದ್ಯಮ, ಕೈಗಾರಿಗೆ, ಪರಿಸರ ಸಂರಕ್ಷಣೆ ಸೇರಿ ಎಲ್ಲಾ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಲು ಚಿಂತನೆ ಮಾಡುತ್ತಿದ್ದೇವೆ. ಇದಕ್ಕೆ ಮಾರ್ಗಸೂಚಿ ನಿಗದಿ ಮಾಡಿ ಇದಕ್ಕೆ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.

ಈ ವರ್ಷದಿಂದ ಕೆಂಪೇಗೌಡ ಪ್ರಾಧಿಕಾರ ವತಿಯಿಂದ ಮೈಸೂರು ದಸರಕ್ಕೆ ಪ್ರತಿ ವರ್ಷ ಒಂದು ಸ್ಥಬ್ಧಚಿತ್ರ ಕಳಿಸುವ ಕೆಲಸವನ್ನು ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಂಪೇಗೌಡ ಜಯಂತಿ ಆಚರಿಸಲು ಆರ್ಥಿಕ ನೆರವು ನೀಡಲಾಗುವುದು. ಶಾಲೆಗಳಲ್ಲಿ ಮಕ್ಕಳ ಚರ್ಚಾಸ್ಪರ್ಧೆ ಏರ್ಪಡಿಸಲಾಗುವುದು. ಆಮೂಲಕ ಬೆಂಗಳೂರು ಹಾಗೂ ಕೆಂಪೇಗೌಡರ ಇತಿಹಾಸವನ್ನು ಮಕ್ಕಳಲ್ಲಿ ಅರಿವು ಮೂಡಿಸಲಾಗುವುದು.

ಶಾಲಾ ಪಠ್ಯಕ್ರಮದಲ್ಲಿ ಕೆಂಪೇಗೌಡರ ಕುರಿತ ಪಾಠವನ್ನು ಸೇರಿಸುವ ಬಗ್ಗೆ ಪ್ರಾಥಮಿಕ ಶಿಕ್ಷಣ ಸಚಿವರ ಜತೆ ಚರ್ಚೆ ಮಾಡಲಾಗುವುದು. ಇನ್ನು ವಿಮಾನ ನಿಲ್ದಾಣ ಬಳಿಯ ಕೆಂಪೇಗೌಡ ಪ್ರತಿಮೆ ಸುತ್ತಮುತ್ತಲ ಪ್ರದೇಶ ಅಭಿವೃದ್ಧಿ ಮಾಡಲು ಸಚಿವ ಕೃಷ್ಣ ಭೈರೇಗೌಡ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಪ್ರತಿಮೆ ಬಳಿ ಥೀಮ್ ಪಾರ್ಕ್ ಮಾಡಲಾಗುವುದೇ ಎಂದು ಕೇಳಿದಾಗ, "ಬಿಜೆಪಿ ಕಾಲದಲ್ಲಿ ಒಂದು ಪ್ರತಿಮೆ ನಿಲ್ಲಿಸಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿ ಕಾರ್ಯಕ್ರಮ ಮಾಡಿದರು. ಈ ಗುತ್ತಿಗೆದಾರರಿಗೆ ಬಿಲ್ ನೀಡಲಿಲ್ಲ. ಆ ವಿಚಾರದ ಬಗ್ಗೆ ಈಗ ಚರ್ಚೆ ಮಾಡಿ ನಾನು ವಿಷಯಾಂತರ ಮಾಡಲು ಬಯಸುವುದಿಲ್ಲ. ನಾವು ಆ ಪ್ರದೇಶ ಅಭಿವೃದ್ಧಿ ಮಾಡುತ್ತೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೃಷ್ಣ ಭೈರೇಗೌಡ ಅವರು ನೀಡುತ್ತಾರೆ" ಎಂದು ತಿಳಿಸಿದರು. .

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com