
ಬೆಂಗಳೂರು: ಸತತ 18 ವರ್ಷಗಳ ನಂತರ ಚೊಚ್ಚಲ IPL ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಗೆ ಬಂದಿದ್ದ 10 ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಟ್ರೋಫಿ ಗೆದ್ದ ತಂಡವನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಯುವಕ, ಯುವತಿಯರು ಕ್ರೀಡಾಂಗಣದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಈ ವೇಳೆ ಉಂಟಾದ ತಳ್ಳಾಟ, ನೂಕುನುಗ್ಗಲಿನಿಂದ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಓರ್ವ ಮಗು, ಆರು ಪುರುಷರು, ಮೂರು ಮಹಿಳೆಯರು ಸೇರಿದಂತೆ 10 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಬೌರಿಂಗ್ ನಲ್ಲಿ ಆರು,ವೈದೇಹಿ ಆಸ್ಪತ್ರೆಯಲ್ಲಿ ನಾಲ್ವರು ಸಾವು: ಈ ಪೈಕಿ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಗೆ ರವಾನಿಸಲಾಗಿದ್ದ ಆರು ಮಂದಿ ಹಾಗೂ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ನಾಲ್ವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.
16 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಉಸಿರಾಟದ ಸಮಸ್ಯೆಯಿಂದ ಟೆಕ್ಕಿ ಸಹನಾ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 12 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯೇಹಿ ಆಸ್ಪತ್ರೆ ವೈದ್ಯರಾದ ಡಾ. ಉಮೇರಾ ತಿಳಿಸಿದ್ದಾರೆ.
ಏಕಾಏಕಿ ತಳ್ಳಾಟ, ನೂಕಾಟ:18, 19, ಮತ್ತು 20ನೇ ಗೇಟ್ ಓಪನ್ ಆಗುತ್ತಿದ್ದಂತೆ ಅಭಿಮಾನಿಗಳು ಏಕಾಏಕಿ ಒಳನುಗ್ಗಿದ್ದು, ತಳ್ಳಾಟ, ನೂಕುನುಗ್ಗಲು ಉಂಟಾಗಿದೆ.ಈ ವೇಳೆ ಒಬ್ಬರ ಮೇಲೆ ಮತ್ತೋರ್ವರು ಹತ್ತಲು ಪ್ರಯತ್ನಿಸಿದಾಗ ಕಾಲ್ತುಳಿತ ಉಂಟಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಮೃತರ ಸಂಬಂಧಿಕರ ಆಕ್ರಂದನ:
ಆರ್ ಸಿಬಿ ಆಟಗಾರರು ಆಗಮಿಸುವ ಗೇಟ್ ನಂಬರ್ 12 ರ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದ ವೇಳೆ ಭಾರಿ ನೂಕು ನುಗ್ಗಲು ಉಂಟಾಗಿದೆ. ಈ ವೇಳೆ ಗಂಭೀರವಾಗಿ ಅಸ್ವಸ್ಥರಾಗಿದ್ದ ಮಹಿಳಾ ಅಭಿಮಾನಿಯನ್ನು ಕಾರಿನಲ್ಲಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ತನ್ನವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನೂ ಗೇಟ್ ನಂಬರ್ 6 ರ ಬಳಿ ಯುವಕನೋರ್ವ ಗೇಟ್ ಹತ್ತಲು ಹೋಗಿ ಕಾಲು ಮುರಿದುಕೊಂಡಿರುವುದಾಗಿ ವರದಿಯಾಗಿದೆ. ಭಾರಿ ಜನ ಹಾಗೂ ವಾಹನ ದಟ್ಟಣೆಯಿಂದಾಗಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
Advertisement