
ಬೆಂಗಳೂರು: RCB ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ಗಳನ್ನು ಮುರಿದರು. ಹೀಗಾಗಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಗಾಯಗೊಂಡಿದ್ದಾರೆ.
"ಅವರು ಗೇಟ್‌ಗಳನ್ನು ಮುರಿದಿದ್ದಾರೆ. ಹೀಗಾಗಿ ಕಾಲ್ತುಳಿತ ಸಂಭವಿಸಿದೆ ಎಂದು ನಾನು ಭಾವಿಸುತ್ತೇನೆ. ನಾನು ಪೊಲೀಸ್ ಆಯುಕ್ತರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ.... ಸಾವಿನ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲ. ಎಲ್ಲರೂ ಶಾಂತವಾಗಿರಲು ನಾವು ಮನವಿ ಮಾಡುತ್ತೇವೆ" ಎಂದು ಶಿವಕುಮಾರ್ ಹೇಳಿದ್ದಾರೆ.
ದುರಂತದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕಿತ್ಸೆ ನಡೆಯುತ್ತಿರುವ ಆಸ್ಪತ್ರೆಗಳಿಗೆ ಭೇಟಿ, ಗಾಯಾಳುಗಳ ಆರೋಗ್ಯ ವಿಚಾರಿಸುತ್ತೇನೆ ಎಂದು ಹೇಳಿದರು.
"ಅಲ್ಲಿ ಭಾರಿ ಜನಸಂದಣಿ ಇತ್ತು. ನಾವು ಅದನ್ನು ವಿಮಾನ ನಿಲ್ದಾಣದಿಂದಲೇ ನೋಡಿದ್ದೇವೆ. ಆದ್ದರಿಂದ ನಾವು ಮೆರವಣಿಗೆಯನ್ನು ರದ್ದುಗೊಳಿಸಿದೆವು ಮತ್ತು ಅವರನ್ನು (ತಂಡವನ್ನು) ಮುಚ್ಚಿದ ವಾಹನದಲ್ಲಿ ಕರೆತಂದಿದ್ದೇವೆ. ಕನಿಷ್ಠ ವಿಧಾನಸೌಧದಿಂದ ಮೆರವಣಿಗೆ ನಡೆಸಲು ಮನವಿ ಮಾಡಲಾಗಿತ್ತು. ಮಳೆ ಬಂದಿದ್ದರಿಂದ ಜನಸಂದಣಿ ನಿಯಂತ್ರಣಕ್ಕೆ ಬಾರದಾಯಿತು. ಆದ್ದರಿಂದ ನಾವು ಆ ಮೆರವಣಿಗೆಯನ್ನು ರದ್ದುಗೊಳಿಸಿದ್ದೇವೆ. ಕ್ರೀಡಾಂಗಣದಲ್ಲಿ ಸಹ ಮೆರವಣಿಗೆಗೆ ವ್ಯವಸ್ಥೆ ಮಾಡಲಾಗಿತ್ತು ಮತ್ತು ಒಂದು ಗಂಟೆಯ ಕಾರ್ಯಕ್ರಮ ಇತ್ತು. ಆದರೆ ನಾವು ಅದನ್ನು 10-15 ನಿಮಿಷಗಳಲ್ಲಿ ಮುಗಿಸಲು ಸೂಚಿಸಿದ್ದೇವೆ" ಎಂದು ಡಿಸಿಎಂ ತಿಳಿಸಿದರು.
Advertisement