
ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಉಂಟಾದ ಕಾಲ್ತುಳಿತ ದುರಂತದಿಂದ ಬೆಂಗಳೂರಿನ ಇಮೇಜ್ ಹಾಳಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
ಈ ಕುರಿತ ಸುದ್ದಿಗಾರ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯಿಸಿದ ಬೆಂಗಳೂರು ಅಭಿವೃದ್ದಿ ಸಚಿವರು ಆಗಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರ ಪ್ರಶ್ನೆಗಳಿಗೆ ನಾನು ಉತ್ತರಿಸಲು ಬಯಸಲ್ಲಾ. ರಾಜ್ಯ ಮತ್ತು ದೇಶದ ಜನರಿಗೆ ಮಾತ್ರ ಉತ್ತರಿಸುತ್ತೇನೆ. ಎಲ್ಲಾ ಬಿಜೆಪಿ ನಾಯಕರು ನಾನ್ ಸೆನ್ಸ್ ಗಳು. ಇದೆಲ್ಲದರ ಮಾಸ್ಟರ್ ಮೈಂಡ್ ಕೂಡಾ ಆಗಿದ್ದಾರೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಹೆಣಗಳ ಮುಂದೆ ರಾಜಕೀಯ ಮಾಡುತ್ತಿವೆ. ಘಟನೆಗೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆ ಹೊತ್ತುಕೊಳ್ಳಲಿದೆ ಎಂದು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಬಿಜೆಪಿಯವರು ಹೆಣಗಳ ಮುಂದೆ ರಾಜಕೀಯ ಮಾಡುವುದಾದರೆ ಅವರು ಎಷ್ಟು ಹೆಣಗಳ ಮುಂದೆ ರಾಜಕೀಯ ಮಾಡಿದ್ದಾರೆ ಎಂಬುದರ ಪಟ್ಟಿ ನೀಡುತ್ತೇನೆ. ದುರಂತಕ್ಕೂ ಮುನ್ನಾ ವಿಜಯಯಾತ್ರೆಗೆ ಒತ್ತಾಯಿಸಿದ ಬಿಜೆಪಿ, ಅದು ನಡೆದಿದ್ದರೆ ಏನಾಗುತಿತ್ತು ಎಂದು ಪ್ರಶ್ನಿಸಿತ್ತು. ಈಗ ವಿಜಯ ಯಾತ್ರೆ ನಡೆಸದೆ ಕಾಲ್ತುಳಿತ ಉಂಟಾಗಿದೆ. ಒಂದು ವೇಳೆ ವಿಜಯ ಯಾತ್ರೆ ನಡೆದಿದ್ದರೆ ಪರಿಸ್ಥಿತಿ ಏನಾಗುತಿತ್ತೋ ? ಕಾಲ್ತುಳಿತ ಘಟನೆಯಿಂದ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಇಡೀ ರಾಜ್ಯವೇ ಆಘಾತಗೊಂಡಿದೆ ಎಂದರು.
ತನ್ನ ಮಗನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸದಂತೆ ಮಹಿಳೆಯೊಬ್ಬರ ಮನವಿ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮಗನನ್ನು ಕಳೆದುಕೊಂಡ ಮಹಿಳೆ ಆ ರೀತಿ ಮನವಿ ಮಾಡಿದ್ದಾರೆ, ಆದರೆ, ಅದನ್ನು ನಾವು ಹೇಗೆ ಮಾಡಲು ಸಾಧ್ಯ? ನಾವು ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಏಕೆಂದರೆ ನಾಳೆ ಏನಾದರೂ ಪ್ರಶ್ನೆಗಳು ಬರಬಹುದು.ಮರಣೋತ್ತರ ಪರೀಕ್ಷೆ ನಡೆದರೆ ಮಾತ್ರ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.
ಘಟನೆ ನಂತರ ಸ್ಟೇಡಿಯಂ ಬಳಿಗೆ ತೆರಳಿ, ಗೇಟ್ ಗಳನ್ನು ಪರಿಶೀಲಿಸಿದಾಗ ಅನೇಕ ಸಮಸ್ಯೆಗಳು ಕಂಡುಬಂದಿತು. ಮ್ಯಾಜಿಸ್ಟ್ರೇಟ್ ಈ ಎಲ್ಲಾ ಅಂಶಗಳ ಕುರಿತು ತನಿಖೆ ನಡೆಸಲಿದ್ದು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದರು.
Advertisement