
ಬೆಂಗಳೂರು: ಮೊದಲ ಬಾರಿ IPL ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(RCB)ದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ದಾಖಲಿಸಿಕೊಂಡಿದ್ದು, ಇಂದು ಮಧ್ಯಾಹ್ನ ಅದರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಇಂತಹ ಘಟನೆ ತಡೆಗೆ ಎಸ್‌ಒಪಿ ಇರಬೇಕಲ್ಲವೇ. ವೈದ್ಯಕೀಯ ಸಿಬ್ಬಂದಿ, ಆ್ಯಂಬುಲೆನ್ಸ್ ವ್ಯವಸ್ಥೆ ಇರಬೇಕಲ್ಲವೇ? ಕಾಲ್ತುಳಿತವಾದಾಗ ಏನು ಮಾಡಬೇಕೆಂಬ ಬಗ್ಗೆ ಸಿದ್ಧತೆ ಇರಬೇಕಲ್ಲವೇ? ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಬೇಕಲ್ಲವೇ? ಇಂತಹ ಮಾರ್ಗಸೂಚಿ ಏನಾದರೂ ಪಾಲಿಸಿದ್ದೀರಾ? ಎಂದು ರಾಜ್ಯ ಸರ್ಕಾರಕ್ಕೆ ಹಂಗಾಮಿ ಸಿಜೆ ವಿ.ಕಾಮೇಶ್ವರ ರಾವ್ ಅವರು ಪ್ರಶ್ನಿದರು.
ರಾಜ್ಯ ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾಗಿದ್ದ ಎಜಿ ಶಶಿಕಿರಣ್ ಶೆಟ್ಟಿ ಅವರು, ಹೈಕೋರ್ಟ್ ನೀಡುವ ಸಲಹೆಗಳನ್ನು ಪಾಲಿಸಲು ಸರ್ಕಾರ ಬದ್ಧವಾಗಿದೆ. ನಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರತಿರೋಧಿಸುವುದಿಲ್ಲ ಎಂದು ಹೇಳಿದರು.
ಜೂನ್ 3ರಂದು ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದಿತು. ಅದರ ವಿಜಯೋತ್ಸವ ಭದ್ರತೆಗಾಗಿ ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದರು. ಬಂದೋಬಸ್ತ್ ಗಾಗಿ 1,643 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ವಾಟರ್ ಟ್ಯಾಂಕರ್, ಕೆಎಸ್ಆರ್ಪಿ ತುಕಡಿ ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿತ್ತು. ನಿನ್ನೆ 1,600 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಕಾಲ್ತುಳಿತ ಸಂಭವಿಸಿ 56 ಜನ ಗಾಯಗೊಂಡಿದ್ದಾರೆ. ಐವರು ಮಹಿಳೆಯರು ಹಾಗೂ 6 ಪುರುಷರು ಮೃತಪಟ್ಟಿದ್ದಾರೆ. ಕೋಲಾರ, ಉತ್ತರ ಕನ್ನಡ, ತುಮಕೂರು, ಯಾದಗಿರಿ, ಮಂಡ್ಯದಿಂದಲೂ ಬೆಂಗಳೂರಿಗೆ ಜನ ಬಂದಿದ್ದರು. ಒಟ್ಟು ನಿನ್ನೆ ಬೆಂಗಳೂರಿಗೆ 2.5 ಲಕ್ಷ ಜನ ಬಂದಿದ್ದರು ಎಂದು ಕೋರ್ಟ್ಗೆ ತಿಳಿಸಿದರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 34,600 ಜನರಿಗಷ್ಟೇ ವ್ಯವಸ್ಥೆ ಇದೆ. 33 ಸಾವಿರ ಜನರಿಗಷ್ಟೇ ಟಿಕೆಟ್ ನೀಡುತ್ತಾರೆ. ಆದರೆ ನಿನ್ನೆ ಎರಡೂವರೆ ಲಕ್ಷ ಜನರು ಬಂದಿದ್ದರು ಎಜಿ ಹೇಳಿದರು.
ಇಂತಹ ದೊಡ್ಡ ಕಾರ್ಯಕ್ರಮ ನಡೆದಾಗ ಪೂರ್ವ ಸಿದ್ಧತೆ ಏನಿತ್ತು? ಎಂದು ಹೈಕೋರ್ಟ್ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಎಜಿ, ರಾಯಲ್ ಚಾಲೆಂಜರ್ಸ್ ಟಿಕೆಟ್ ಹಂಚಿಕೆ ಮಾಡುತ್ತದೆ. ಸ್ಟೇಡಿಯಂನ ಎಲ್ಲಾ ವ್ಯವಸ್ಥೆ ಅವರೇ ಮಾಡುತ್ತಾರೆ. ಬೆಂಗಳೂರಿನೆಲ್ಲೆಡೆ ಬೆಳಗಿನ ಜಾವ 4 ಗಂಟೆಯಿಂದಲೇ ಜನ ಬರುತ್ತಿದ್ದರು. 3 ಗಂಟೆಯೊಳಗೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜನದಟ್ಟಣೆಯಾಗಿತ್ತು. ರಾಜ್ಯವಲ್ಲದೇ ಅನ್ಯ ರಾಜ್ಯದಿಂದಲೂ ಜನ ಬಂದಿದ್ದರು. ಕೊಯಮತ್ತೂರಿನ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದರು.
ಘಟನೆ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿ, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.
Advertisement