ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ. ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಇಂದು ಮಧ್ಯಾಹ್ನ ವಿಚಾರಣೆ ನಡೆಸಿದ ಹೈಕೋರ್ಟ್, ಇಂತಹ ಘಟನೆ ತಡೆಗೆ ಎಸ್‌ಒಪಿ ಇರಬೇಕಲ್ಲವೇ. ವೈದ್ಯಕೀಯ ಸಿಬ್ಬಂದಿ, ಆ್ಯಂಬುಲೆನ್ಸ್ ವ್ಯವಸ್ಥೆ ಇರಬೇಕಲ್ಲವೇ? ಕಾಲ್ತುಳಿತವಾದಾಗ ಏನು ಮಾಡಬೇಕೆಂಬ ಬಗ್ಗೆ ಸಿದ್ಧತೆ ಇರಬೇಕಲ್ಲವೇ? ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಬೇಕಲ್ಲವೇ? ಇಂತಹ ಮಾರ್ಗಸೂಚಿ ಏನಾದರೂ ಪಾಲಿಸಿದ್ದೀರಾ? ಎಂದು ಹಂಗಾಮಿ ಸಿಜೆ ವಿ.ಕಾಮೇಶ್ವರ ರಾವ್ ಪ್ರಶ್ನಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 34,600 ಜನರಿಗಷ್ಟೇ ವ್ಯವಸ್ಥೆ ಇದೆ. 33 ಸಾವಿರ ಜನರಿಗಷ್ಟೇ ಟಿಕೆಟ್ ನೀಡುತ್ತಾರೆ. ಆದರೆ ನಿನ್ನೆ ಎರಡೂವರೆ ಲಕ್ಷ ಜನರು ಬಂದಿದ್ದರು ಎಜಿ ಕೋರ್ಟ್ ಗೆ ಮಾಹಿತಿ ನೀಡಿದರು. ಇಂತಹ ದೊಡ್ಡ ಕಾರ್ಯಕ್ರಮ ನಡೆದಾಗ ಪೂರ್ವ ಸಿದ್ಧತೆ ಏನಿತ್ತು? ಎಂದು ಹೈಕೋರ್ಟ್ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಎಜಿ, ರಾಯಲ್ ಚಾಲೆಂಜರ್ಸ್ ಟಿಕೆಟ್ ಹಂಚಿಕೆ ಮಾಡುತ್ತದೆ. ಸ್ಟೇಡಿಯಂನ ಎಲ್ಲಾ ವ್ಯವಸ್ಥೆ ಅವರೇ ಮಾಡುತ್ತಾರೆ. ಬೆಂಗಳೂರಿನೆಲ್ಲೆಡೆ ಬೆಳಗಿನ ಜಾವ 4 ಗಂಟೆಯಿಂದಲೇ ಜನ ಬರುತ್ತಿದ್ದರು. 3 ಗಂಟೆಯೊಳಗೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜನದಟ್ಟಣೆಯಾಗಿತ್ತು. ರಾಜ್ಯವಲ್ಲದೇ ಅನ್ಯ ರಾಜ್ಯದಿಂದಲೂ ಜನ ಬಂದಿದ್ದರು ಎಂದು ಎಜಿ ಹೇಳಿದರು. ಘಟನೆ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದ ಹೈಕೋರ್ಟ್, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟಿದ್ದು, ಈ ಕುರಿತು ರಾಜ್ಯ ಸರ್ಕಾರ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದೆ. ಕಾಲ್ತುಳಿತದ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಯ ನೇತೃತ್ವ ವಹಿಸಿಕೊಂಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ), ರಾಯಲ್ ಚಾಲೆಂಜರ್ಸ್ ಬೆಂಗಳೂರುಮತ್ತು ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವುದಾಗಿ ಹೇಳಿದ್ದಾರೆ. ಈ ಮಧ್ಯೆ, ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ನಿನ್ನೆ ಕಾಲ್ತುಳಿತ ದುರಂತ ಸಂಭವಿಸಿದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರು, ಹಿರಿಯ ಪೊಲೀಸ್ ಅಧಿಕಾರಿಗಳು, ಪೊಲೀಸ್ ಉಪ ಆಯುಕ್ತರು (ಡಿಸಿಪಿಗಳು) ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ (ಕೆಎಸ್‌ಸಿಎ) ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಇದಕ್ಕೂ ಮೊದಲು, ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದ ಸ್ಥಳವನ್ನು ಪರಿಶೀಲಿಸಿದರು. ಕ್ರೀಡಾಂಗಣದಲ್ಲಿ ವಿಜಯೋತ್ಸವವನ್ನು ಆಯೋಜಿಸಲು ರಾಜ್ಯ ಸರ್ಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ಗೆ ಹೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟಲು ಸರ್ಕಾರ ಯಾವುದೇ ಸಭೆ ಸಮಾರಂಭಗಳನ್ನು ಮಾಡುವಾಗ, ವಿಜಯೋತ್ಸವವನ್ನು ಮಾಡುವ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ ಮಾರ್ಗದರ್ಶನದಲ್ಲಿ ಮಾಡಬೇಕೆಂದು ಸೂಚನೆಗಳನ್ನು ನೀಡುತ್ತೇವೆ. ಹೊಸ ಶಿಷ್ಟಾಚಾರಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ಕೃಷಿ ಪಂಪ್ ಸೆಟ್ ಗಳಿಗೆ 10 ಹೆಚ್'ಪಿವರೆಗೆ ಉಚಿತ ವಿದ್ಯುತ್ ಸರಬರಾಜು ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಕೆಜೆ.ಜಾರ್ಜ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಕೃಷಿ ಪಂರ್ ಸೆಟ್ ಗಳ ಆರ್ ಆರ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡುತ್ತಿರುವುದರಿಂದ ಅವುಗಳಿಗೆ ಉಚಿತ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂಬ ಊಹಾಪೋಹಗಳು ಹಬ್ಬುತ್ತಿವೆ. ರೈತರಿಗೆ ಎಷ್ಟು ವಿದ್ಯುತ್ ಪೂರೈಸಲಾಗುತ್ತಿದೆ ಮತ್ತು ಎಷ್ಟು ಸಂಪರ್ಕಗಳಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕಾರ್ಯ ಹಮ್ಮಿಕೊಳ್ಳಲಾಗಿದೆ, ಇದರಲ್ಲಿ ಅನುಮಾನ ಬೇಡ ಎಂದು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಬೆಂಗಳೂರಿನಲ್ಲಿ ನಡೆದ ಸಂಭ್ರಮಾಚರಣೆಯ ಕಾರ್ಯಕ್ರಮದ ದಿನ ನಮ್ಮ ಮೆಟ್ರೋದಲ್ಲಿ ದಾಖಲೆಯ ಮಟ್ಟದಲ್ಲಿ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ತಮ್ಮ ನೆಚ್ಚಿನ ಆಟಗಾರರನ್ನು ನೋಡುವ ಸಲುವಾಗಿ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂಗೆ ಬರಲು ದಾಖಲೆ ಮಟ್ಟದಲ್ಲಿ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಜೂನ್ 4ರ ಒಂದೇ ದಿನ ನಮ್ಮ ಮೆಟ್ರೋದಲ್ಲಿ 9,66,732 ಪ್ರಯಾಣಿಕರು ಸಂಚರಿಸಿದ್ದಾರೆಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement