
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರವ RCB ಮಾರ್ಕೆಟಿಂಗ್ ಮ್ಯಾನೇಜರ್ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರಿಗೆ ಕೋರ್ಟ್ ಶುಕ್ರವಾರ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪರಾಧ ವಿಭಾಗ ಮತ್ತು ಬೆಂಗಳೂರು ಪೊಲೀಸರು ಇಂದು ಬೆಳಗ್ಗೆ ಜಂಟಿ ಕಾರ್ಯಾಚರಣೆ ನಡೆಸಿ RCBಯ ನಿಖಿಲ್ ಸೋಸಲೆ, ಸುಮಂತ್, ಡಿಎನ್ಎ ಮ್ಯಾನೇಜರ್ ಕಿರಣ್, ಸಿಬ್ಬಂದಿ ಸುನೀಲ್ ಮ್ಯಾಥ್ಯೂ ಅವರನ್ನು ಬಂಧಿಸಲಾಗಿತ್ತು.
ಇಂದು ಸಂಜೆ ಬಂಧಿತ ನಾಲ್ವರನ್ನು ಬೆಂಗಳೂರಿನ 41ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಗಳ ವಿಚಾರಣೆ ನಡೆಸಿದ ಕೋರ್ಟ್, ನಾಲ್ವರನ್ನು ಜೂನ್ 19ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಇನ್ನು ದುಬೈಗೆ ತೆರಳುತ್ತಿದ್ದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲ್ಪಟ್ಟ ನಿಖಿಲ್ ಸೋಸಲೆ, ಕರ್ನಾಟಕ ಹೈಕೋರ್ಟ್‌ನಲ್ಲಿ ತನ್ನ ಬಂಧನವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರು, ಬಂಧನದಿಂದ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ್ದು, ಪ್ರಕರಣವನ್ನು ಜೂನ್ 9 ಕ್ಕೆ ಮುಂದೂಡಿದ್ದಾರೆ.
ಮೊದಲ ಬಾರಿ IPL ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(RCB)ದ ಸಂಭ್ರಮಾಚರಣೆ ವೇಳೆ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟಿದ್ದಾರೆ.
Advertisement