
ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನರು ದುರ್ಮರಣ ಹೊಂದಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಯಡಿಯೂರಪ್ಪ, ಸ್ವತಃ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಮುಂದೆ ನಿಂತು ಇಡೀ ಸರ್ಕಾರವೇ ವ್ಯವಸ್ಥೆಯ ಜವಾಬ್ದಾರಿ ಹೊತ್ತು, ಆರ್.ಸಿ.ಬಿ ವಿಜಯೋತ್ಸವದ ಆಚರಣೆಗೆ ಮುಂದಾಗಿ, ಇಂತಹ ಬಹುದೊಡ್ಡ ದುರಂತಕ್ಕೆ ಕಾರಣವಾಗಿರುವಾಗ, ತಮ್ಮ ನೈತಿಕ ಜವಾಬ್ದಾರಿಯನ್ನು ಮರೆತು, ಜನರ ಆಕ್ರೋಶವನ್ನು ತಣ್ಣಗಾಗಿಸಬಹುದೆಂಬ ದುರಾಲೋಚನೆಯಿಂದ ಪೊಲೀಸ್ ಆಯುಕ್ತರೂ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ ಅಮಾನತು ಮಾಡಿರುವುದು ನಾಚಿಕೆಗೇಡಿನ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾರಂಭಕ್ಕೂ ಮುನ್ನವೇ ಕಾಲ್ತುಳಿತದಿಂದ ಸಾವು-ನೋವಾಗಿರುವ ಸುದ್ದಿ ತಲುಪಿದರೂ ಭಂಡತನದಿಂದ ಸನ್ಮಾನ ಕಾರ್ಯಕ್ರಮವನ್ನು ಮುಗಿಸಿ, ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಕಾರ್ಯಕ್ರಮ ಮುಂದುವರೆಸಿ, ಕಾಂಗ್ರೆಸ್ ಸರ್ಕಾರ ಕರುನಾಡಿನಲ್ಲಿ ಕರಾಳ ಇತಿಹಾಸ ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ.
ಜನರ ಆಕ್ರೋಶವನ್ನು ತಣಿಸಲು ಹಾಗೂ ಉಚ್ಚ ನ್ಯಾಯಾಲಯದ ನ್ಯಾಯದಂಡದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಕುರ್ಚಿಗೆ ಅಂಟಿ ಕೂರುವ ಸ್ವಾರ್ಥದ ಕ್ರಮವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಈ ದುರಂತ ಘಟನೆಯ ಜವಾಬ್ದಾರಿ ಹೊತ್ತು ಈ ಕೂಡಲೇ ರಾಜಿನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೇರಿದಂತೆ ಹಲವು ಅಧಿಕಾರಿಗಳನ್ನು ಅಮಾನತು ಮಾಡಿದ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.
Advertisement