
ನವದೆಹಲಿ: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಧಾರವಾಡ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ವಿನಯ್ ಕುಲಕರ್ಣಿ ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್, ಶುಕ್ರವಾರ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ ಒಂದು ವಾರದಲ್ಲಿ ಕೋರ್ಟ್ ಮುಂದೆ ಶರಣಾಗಲು ಕಾಂಗ್ರೆಸ್ ಶಾಸಕನಿಗೆ ಸೂಚಿಸಿದೆ. ಈ ಮೂಲಕ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲು ಪಾಲಾಗುವ ಸಾಧ್ಯತೆ ಇದೆ.
ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ವಿನಯ್ ಕುಲಕರ್ಣಿ ಅವರಿಗೆ 2021ರ ಆಗಸ್ಟ್ 11ರಂದು ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಆದರೆ ಈ ಜಾಮೀನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಸಾಕ್ಷಿಗಳಿಗೆ 1 ಲಕ್ಷ ರೂ. ಹಣದ ಆಮಿಷ ಒಡ್ಡಿರುವುದರಿಂದ ಜಾಮೀನು ರದ್ದುಗೊಳಿಸುವಂತೆ ಮನವಿ ಮಾಡಿತ್ತು. ಇದೀಗ ಸಿಬಿಐ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್, ವಿನಯ್ ಕುಲಕರ್ಣಿಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
2016ರ ಜೂನ್ 15ರಂದು ಧಾರವಾಡದಲ್ಲಿ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರನ್ನು ಹತ್ಯೆ ಮಾಡಲಾಗಿತ್ತು.
ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿಯನ್ನಾಗಿ ಮಾಡಲಾಗಿದ್ದು, ಯೋಗೀಶ್ ಗೌಡ ಅವರು ಧಾರವಾಡದಲ್ಲಿ ನಾಯಕರಾಗಿ ಬೆಳೆಯುವುದು ವಿನಯ್ ಕುಲಕರ್ಣಿ ಅವರಿಗೆ ಇಷ್ಟವಿರಲಿಲ್ಲ. ಅದೇ ಸಮಯದಲ್ಲಿ ಕುಲಕರ್ಣಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಹೀಗಾಗಿಯೇ ಯೋಗೀಶ್‌ಗೌಡ ಅವರನ್ನು ಅವರನ್ನು ಕೊಲ್ಲಲು ಹಣ ನೀಡಿದ್ದರು ಎಂದು ಸಿಬಿಐ ಆರೋಪಿಸಿದೆ.
Advertisement