
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದು, 56 ಮಂದಿ ಗಾಯಗೊಂಡಿದ್ದಾರೆ.
ಕಾಲ್ತುಳಿತ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಸಿಐಡಿ ವಿಶೇಷ ವಿಚಾರಣಾ ದಳದ ಎಸ್ಪಿ ಶುಭನ್ವಿತಾ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.
ಕಾಲ್ತುಳಿತ ಪ್ರಕರಣದ ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳ ತಂಡ ಶುಕ್ರವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಕಚೇರಿಗೆ ಭೇಟಿ ನೀಡಿ, ಕಾಲ್ತುಳಿತ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ.
ಗೇಟ್ ನಂಬರ್ 7, 19, 18, 16 ಮತ್ತು 21 ರ ಬಳಿ ಹೆಚ್ಚು ಅನಾಹುತ ಆಗಿತ್ತು. ಅಲ್ಲಿಗೆ ಭೇಟಿ ನೀಡಿದ ಸಿಐಡಿ ತಂಡ ಪರಿಶೀಲನೆ ನಡೆಸಿದೆ.
ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲು ಸಿಐಡಿ ಈಗಾಗಲೇ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದೆ. ಆದರೆ ಇಂದು ಸರ್ಕಾರಿ ರಜೆ, ನಾಳೆ ಭಾನುವಾರವಾಗಿರುವುದರಿಂದ, ಸೋಮವಾರ ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಸಿಐಡಿ ತಂಡ ಸಿದ್ಧತೆ ನಡೆಸಿದೆ.
Advertisement