
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಐಪಿಎಲ್ ಟ್ರೋಫಿ ಆಚರಣೆಯ ಸಂದರ್ಭದಲ್ಲಿ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆಗೆ ನೈತಿಕ ಹೊಣೆ ಹೊತ್ತು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗಳಿಗೆ ಎ ಶಂಕರ್ ಮತ್ತು ಇ ಎಸ್ ಜೈರಾಮ್ ರಾಜೀನಾಮೆ ನೀಡಿದ್ದಾರೆ.
ಮೊನ್ನೆ ಗುರುವಾರ ರಾತ್ರಿ ಕೆಎಸ್‌ಸಿಎ ಅಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ಜಂಟಿ ಹೇಳಿಕೆಯಲ್ಲಿ ಶಂಕರ್ ಮತ್ತು ಜೈರಾಮ್ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ ನಡೆದ ಅನಿರೀಕ್ಷಿತ ಮತ್ತು ದುರದೃಷ್ಟಕರ ಘಟನೆಯಲ್ಲಿ ನಮ್ಮ ಪಾತ್ರ ಬಹಳ ಸೀಮಿತವಾಗಿದ್ದರೂ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗಳಿಗೆ ನಾವು ರಾಜೀನಾಮೆ ನೀಡಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಶಂಕರ್ ಮತ್ತು ಖಜಾಂಚಿ ಜಯರಾಮ್ ಅವರು ಹೈಕೋರ್ಟ್ ಗೆ ಪ್ರತಿಕ್ರಿಯೆ ನೀಡಿ, ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್ ನಿರ್ವಹಣೆ ಮತ್ತು ಜನಸಂದಣಿ ನಿರ್ವಹಣೆ ಸಂಘದ ಜವಾಬ್ದಾರಿಯಲ್ಲ. ವಿಧಾನಸೌಧದಲ್ಲಿ ಆರ್‌ಸಿಬಿ ಐಪಿಎಲ್ ಆಚರಣೆಗಳನ್ನು ನಡೆಸಲು ಅನುಮತಿ ಕೋರಿದ್ದೆವು ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸನ್ಮಾನ ಸಮಾರಂಭವು ಯಾವುದೇ ಪ್ರಮುಖ ಅಡಚಣೆಗಳಿಲ್ಲದೆ ನಡೆದರೂ, ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಅವ್ಯವಸ್ಥೆ ಭುಗಿಲೆದ್ದಿತು, ಅಲ್ಲಿ ಆರ್‌ಸಿಬಿಯ ಸೋಷಿಯಲ್ ಮೀಡಿಯಾ ಪೇಜ್ ನ್ನು ಅನುಸರಿಸಿ ಲಕ್ಷಾಂತರ ಜನರು ಸೇರಿದ್ದರು, ಕೊನೆಗೆ ಪರೇಡ್ ರದ್ದಾದಾಗ ಸೋಷಿಯಲ್ ಮೀಡಿಯಾ ಪೇಜ್ ನಿಂದ ಮೆಸೇಜ್ ನ್ನು ಅಳಿಸಿಹಾಕಲಾಗಿತ್ತು.
ಆರ್ ಸಿಬಿ ಆಟಗಾರರ ಯೋಜಿತ ವಿಜಯೋತ್ಸವ ಮೆರವಣಿಗೆಯನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿತ್ತು. ಹೊರಗೆ ನಡೆದ ದುರಂತದ ಹೊರತಾಗಿಯೂ ಕ್ರೀಡಾಂಗಣದೊಳಗಿನ ಕಾರ್ಯಕ್ರಮ ಮುಂದುವರೆಯಿತು.
Advertisement