ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ತುಮಕೂರು ಸೇರಿಸಲು ಶೀಘ್ರ ಸರ್ಕಾರಕ್ಕೆ ಪ್ರಸ್ತಾವನೆ: ಪರಮೇಶ್ವರ

ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ ರೀತಿಯಲ್ಲಿ, ತುಮಕೂರನ್ನು ಗ್ರೇಟರ್ ಬೆಂಗಳೂರಿನಲ್ಲಿ ಸೇರಿಸಿದರೆ, ಅಭಿವೃದ್ಧಿಯ ವಿಷಯದಲ್ಲಿ ನಮಗೆ ಪ್ರಯೋಜನವಾಗುತ್ತದೆ.
G Parameshwara
ಗೃಹ ಸಚಿವ ಡಾ. ಜಿ ಪರಮೇಶ್ವರ
Updated on

ಬೆಂಗಳೂರು: ತುಮಕೂರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ವ್ಯಾಪ್ತಿಗೆ ಸೇರಿಸಲು ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಸೋಮವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ತುಮಕೂರು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಗಮನಸೆಳೆದರು. “20,000 ಎಕರೆ ಪ್ರದೇಶದಲ್ಲಿ(ತುಮಕೂರಿನಲ್ಲಿ) ಕೈಗಾರಿಕಾ ಕೇಂದ್ರವಿದೆ. ಬೆಂಗಳೂರಿನಂತೆ ತುಮಕೂರನ್ನು ವಿಸ್ತರಿಸಬೇಕೆಂದು ಹಲವರು ಒತ್ತಾಯಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ” ಎಂದು ಅವರು ಹೇಳಿದರು.

“ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ ರೀತಿಯಲ್ಲಿ, ತುಮಕೂರನ್ನು ಗ್ರೇಟರ್ ಬೆಂಗಳೂರಿನಲ್ಲಿ ಸೇರಿಸಿದರೆ, ಅಭಿವೃದ್ಧಿಯ ವಿಷಯದಲ್ಲಿ ನಮಗೆ ಪ್ರಯೋಜನವಾಗುತ್ತದೆ. ನಾವು ಅದರ ಬಗ್ಗೆ ಪ್ರಸ್ತಾವನೆ ಸಲ್ಲಿಸುತ್ತೇವೆ” ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪರಮೇಶ್ವರ ಹೇಳಿದರು.

G Parameshwara
ಗ್ರೇಟರ್ ಬೆಂಗಳೂರು ಅಡಿ 3 ಪಾಲಿಕೆ ಸಾಧ್ಯತೆ: ಸಿಎಂ ಸಿದ್ದರಾಮಯ್ಯ

ಎರಡು ನಗರಗಳ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಬೆಂಗಳೂರು ಮೆಟ್ರೋ ಸೇವೆಯನ್ನು ತುಮಕೂರಿಗೆ ವಿಸ್ತರಿಸಬೇಕೆಂಬ ಬೇಡಿಕೆಯ ನಡುವೆ ಈ ಪ್ರಸ್ತಾಪ ಬಂದಿದೆ.

ತುಮಕೂರಿಗೆ ಮೆಟ್ರೋ ಸೇವೆ ವಿಸ್ತರಿಸುವ ಬಗ್ಗೆ ಕರ್ನಾಟಕ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದ ಗೃಹ ಸಚಿವರು, "ತುಮಕೂರಿಗೆ ಮೆಟ್ರೋ ಸಂಪರ್ಕದ ಅಗತ್ಯವಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಮೆಟ್ರೋ ಮತ್ತು ಉಪನಗರ ರೈಲು ಸಂಪರ್ಕ ಎರಡೂ ಇರಲಿ" ಎಂದು ಅವರು ಹೇಳಿದರು.

ಇದೇ ವೇಳೆ ತಮ್ಮ ಖಾತೆ ಬದಲಾವಣೆ ಕೇಳಿದ್ದಾರೆ ಎಂಬ ವರದಿಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, "ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ನಂತರ ಮುಖ್ಯಮಂತ್ರಿ ಬಳಿ ನನ್ನ ಖಾತೆ ಬದಲಾವಣೆ ಕೇಳಿದ್ದೇನೆ ಎಂಬ ವರದಿಗಳು ಬಂದವು. ಆದರೆ ಇದನ್ನು ನಿಮಗೆ(ಮಾಧ್ಯಮಕ್ಕೆ) ಯಾರು ಹೇಳಿದರು? ಯಾವುದೇ ಸುದ್ದಿಯನ್ನು ಪ್ರಕಟಿಸುವ ಮೊದಲು ದಯವಿಟ್ಟು ಸತ್ಯವನ್ನು ಪರಿಶೀಲಿಸಿ” ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com