
ಚಿಕ್ಕಮಗಳೂರು: ಚಾರಣಕ್ಕೆ ಹೊರಟಿದ್ದ 11 ವಿದ್ಯಾರ್ಥಿಗಳು ಕಾಡಿನಲ್ಲಿ ದಾರಿ ತಪ್ಪಿ ಮಧ್ಯರಾತ್ರಿವರೆಗೂ ಪರದಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ದುರ್ಗ ಪ್ರವಾಸಿ ತಾಣದಲ್ಲಿ ನಡೆದಿದೆ.
ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು, 5 ಹುಡುಗಿಯರು ಟ್ರಕ್ಕಿಂಗ್ ಬಂದಿದ್ದು, ಡ್ರೈವರ್ ಸೇರಿ 11 ಜನ ಚಾರಣಕ್ಕೆ ಹೊರಟಿದ್ದರು. ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾದಲ್ಲಿ ಟಿಕೆಟ್ ಬುಕ್ ಮಾಡಿಸಿ ದಾರಿ ತಿಳಿಯದೆ ಮಂಗಳೂರಿನ ಬಂಡಾಜೆ ಮಾರ್ಗವಾಗಿ ಹತ್ತಿದ್ದರು.
ರಾಣಿಝರಿ ಕಡೆಯಿಂದ ಚಾರಣ ಆರಂಭಿಸಬೇಕಿತ್ತು. ಗೂಗಲ್ ಮ್ಯಾಪ್‌ನಲ್ಲಿ ಬಂಡಾಜೆ ಟ್ರಕ್ಕಿಂಗ್ ಎಂದು ನಮೂದಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯ ದಿಡಪೆ ಮಾರ್ಗ ತೋರಿಸಿದೆ. ಅಲ್ಲಿಂದ ಚಾರಣ ಆರಂಭಿಸಿದ್ದು, ಬಂಡಾಜೆ ಜಲಪಾತ ತನಕ ಹೋಗಿದ್ದಾರೆ. ವಾಪಸ್ ಬರಲು ಬಲ್ಲಾಳರಾಯನದುರ್ಗ ಮತ್ತು ರಾಣಿಝರಿ ಕಡೆಯ ಮಾರ್ಗ ಹಿಡಿದಿದ್ದಾರೆ. ಅಷ್ಟರಲ್ಲಿ ಕತ್ತಲಾಗಿದ್ದರಿಂದ ದಾರಿ ತಪ್ಪಿದ್ದಾರೆ. ನೆಟ್‌ವರ್ಕ್ ಇಲ್ಲದ ಕಾರಣ ಗೂಗಲ್ ಮ್ಯಾಪ್ ಕೂಡ ಕೆಲಸ ಮಾಡಿಲ್ಲ.
ಕಾಡಿನಲ್ಲಿ ದಾರಿ ತಪ್ಪಿ ಇಡೀ ಕಾಡು ಸುತ್ತಿ ವಿದ್ಯಾರ್ಥಿಗಳು ನಿತ್ರಾಣಗೊಂಡಿದ್ದರು. ವಿಷಯ ತಿಳಿದ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸರು ಸಂಜೆಯಿಂದ ಮಧ್ಯರಾತ್ರಿಯ 2 ಗಂಟೆವರೆಗೂ ಕಗ್ಗತ್ತಲಿನ ಕಾಡಿನಲ್ಲಿ ಕಲ್ಲು-ಮುಳ್ಳುಗಳ ದುರ್ಗಮ ಹಾದಿಯಲ್ಲಿ 11 ಜನ ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಬಾಳೂರು ಪೊಲೀಸರ ಜೊತೆ ಮೂಡಿಗೆರೆ ಸ್ಥಳೀಯ ಯುವಕರು ಹುಡುಕಾಟಕ್ಕೆ ಕೈ ಜೋಡಿಸಿದ್ದರು. ನಿರಂತರ 6 ಗಂಟೆಗಳ ಹುಡುಕಾಟದ ಬಳಿಕ ಮಧ್ಯರಾತ್ರಿ 2 ಗಂಟೆಗೆ ಡ್ರೈವರ್ ಸೇರಿ 11 ಜನ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ಚಾರಣಕ್ಕೆ ಬಂದವರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು. ಇನ್ನೂ ಬೇರೆ ಬೇರೆ ಕಾಲೇಜುಗಳ ಹೆಸರು ಹೇಳಿದರು. ಎಲ್ಲರನ್ನೂ ವಾಹನ ಹತ್ತಿಸಿ ಚಿತ್ರದುರ್ಗಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Advertisement