
ಬೆಂಗಳೂರು: 11 ಜೀವಗಳನ್ನು ಬಲಿ ಪಡೆದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕರ್ನಾಟಕ ಹೈಕೋರ್ಟ್ ಗುರುವಾರ ಸ್ವೀಕರಿಸಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿ ಆಧರಿಸಿ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ ಜೋಶಿ ಅವರಿದ್ದ ವಿಭಾಗೀಯ ಪೀಠಕ್ಕೆ ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ಸಲ್ಲಿಸಲಾಯಿತು.
ಕನ್ನಡದಲ್ಲಿದ್ದ ದಾಖಲೆಗಳನ್ನು ಸ್ವೀಕರಿಸಿದ ಹೈಕೋರ್ಟ್, ಇಂಗ್ಲಿಷ್ ಗೆ ಭಾಷಾಂತರಿಸಲು ಸರ್ಕಾರಕ್ಕೆ ಸೂಚಿಸಿದೆ. ಇದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರು, ಎರಡು ದಿನಗಳಲ್ಲಿ ಇಂಗ್ಲಿಷ್ ಗೆ ಅನುವಾದಿಸಿದ ದಾಖಲೆಗಳನ್ನು ಒದಗಿಸಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿದರು.
ಈ ರೀತಿಯ ಕಾರ್ಯಕ್ರಮಗಳ ಆಯೋಜನೆಗೆ ಎಸ್‌ಒಪಿ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಶಿಕಿರಣ್ ಶೆಟ್ಟಿ ಇದೇ ವೇಳೆ ಪೀಠಕ್ಕೆ ಭರವಸೆ ನೀಡಿದರು. ವಿಚಾರಣೆ ವೇಳೆ ಮಧ್ಯಪ್ರವೇಶಿಸಿದ ವಕೀಲರೊಬ್ಬರು, ಮೃತರ ಸಂಬಂಧಿಕರಿಗೆ ಪರಿಹಾರ ಮೊತ್ತ ಹೆಚ್ಚಳ ಮಾಡಬೇಕು ಎಂದು ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದರು. ಅದಕ್ಕೆ ಉತ್ತರಿಸಿ ಅಡ್ವೋಕೇಟ್ ಜನರಲ್, ಈಗಾಗಲೇ ಮೃತರರ ಕುಟುಂಬಗಳಿಗೆ 25 ಲಕ್ಷ ರೂ.ಗಳ ಪರಿಹಾರವನ್ನು ನೀಡಿರುವುದಾಗಿ ತಿಳಿಸಿದರು.
ಆರ್ ಸಿಬಿ ವಿಜಯೋತ್ಸವಕ್ಕೆ ಸಂಬಂಧಪಟ್ಟ ಎಲ್ಲಾ ಆಫ್‌ಲೈನ್ ಮತ್ತು ಆನ್‌ಲೈನ್ ಅಧಿಕೃತ ಸಂವಹನ ದಾಖಲೆಗಳನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯ ವಶದಲ್ಲಿಡಬೇಕೆಂದು ನಿರ್ದೇಶಿಸಿದ ಹೈಕೋರ್ಟ್, ವಿಚಾರಣೆಯನ್ನು ಜೂನ್ 17ಕ್ಕೆ ಮುಂದೂಡಿದೆ.
ಜೂನ್ 3 ರಂದು 2025 ರ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ, ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಿಸುವ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
Advertisement