ಜಾತಿ ಗಣತಿಯಲ್ಲಿ ನಮಗೆ ರಾಜಕೀಯ ಬೇಡ, ಸಾಮಾಜಿಕ ನ್ಯಾಯ ಬೇಕು: ಡಿಸಿಎಂ ಡಿ.ಕೆ ಶಿವಕುಮಾರ್

ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.
DK Shivakumar
ಡಿಕೆ ಶಿವಕುಮಾರ್ online desk
Updated on

ಬೆಂಗಳೂರು: ನಮಗೆ ರಾಜಕೀಯ ಬಣ್ಣ ಬೇಡ. ಸಾಮಾಜಿಕ ನ್ಯಾಯ ಬೇಕು. ಈ ಕಾರಣಕ್ಕೆ ನಾವು ಮತ್ತೊಮ್ಮೆ ಜಾತಿ ಜನಗಣತಿ ಮಾಡಲು ತೀರ್ಮಾನ ಮಾಡಿದ್ದೇವೆ. ಈ ಹಿಂದಿನ ವರದಿ ಬಗ್ಗೆ ಟೀಕೆ ಮಾಡಿದ್ದ ವಿರೋಧ ಪಕ್ಷದವರು ಈಗ ಉಲ್ಟಾ ಮಾತಾಡುತ್ತಿದ್ದಾರೆ. ಅದರ ಬದಲು ಹಳೆಯದನ್ನೇ ಒಪ್ಪಿಕೊಳ್ಳುವಂತೆ ಆಗ್ರಹಿಸಲಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.

ಜಾತಿಗಣತಿ ವಿಚಾರವಾಗಿ ಮರುಸಮೀಕ್ಷೆಗೆ ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧ ಪಕ್ಷಗಳು ಟೀಕಿಸುತ್ತಿರುವ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ, ವಿಜಯೇಂದ್ರ, ಅಶೋಕ್ ಅವರು ಪುನಃ ಮಾಧ್ಯಮಗೋಷ್ಠಿ ಮಾಡಿ ಹಳೆಯ ವರದಿಯನ್ನೇ ಸ್ವೀಕರಿಸಿ ಎಂದು ಈಗ ಹೇಳಲಿ. ವಿರೋಧ ಪಕ್ಷದವರು ಈಗ ಏನೇನೋ ಮಾತನಾಡುತ್ತಿದ್ದಾರೆ. ಇದಕ್ಕೆ ನಿಧಾನಕ್ಕೆ ಉತ್ತರ ನೀಡೋಣ. ಯಾರು, ಯಾರು ಏನೇನು ಹೇಳುತ್ತಿದ್ದರು, ಅಶೋಕ್ ಏನು ಹೇಳಿದ್ದಾರೆ ಎಂಬುದನ್ನು ಮಾಧ್ಯಮಗಳು ಮತ್ತೆ ಪ್ರಸಾರ ಮಾಡಿಲಿ. ವಿರೋಧ ಪಕ್ಷದವರು ಹಿಂದೆ ಒಂದು, ಮುಂದೆ ಒಂದು ಮಾತನಾಡಿ ರಾಜಕೀಯವಾಗಿ ಬಣ್ಣ ಕಟ್ಟುತ್ತಿದ್ದಾರೆ” ಎಂದರು.

DK Shivakumar
ಬೆಂಗಳೂರು ಕಾಲ್ತುಳಿತ: ಸಿಎಂ ಸಿದ್ದರಾಮಯ್ಯ ಬುದ್ಧಿ ಇಲ್ಲದವರಂತೆ ವರ್ತನೆ, ರಾಜಕೀಯ ಪ್ರತಿಷ್ಠೆ ಮರೆಮಾಚಲು ಯತ್ನ- ಕೇಂದ್ರ ಸಚಿವ ಪ್ರಲ್ಹಾದ ಜೋಶಿ

“ಯಾರು ಏನು ಬೇಕಾದರೂ ಹೇಳಲಿ. ಜನರು, ಶಾಸಕರುಗಳ ಭಾವನೆ, ಅಭಿಪ್ರಾಯ ಅರಿತು ಕಾನೂನಾತ್ಮಕವಾಗಿ ಜಾತಿ ಗಣತಿ ಮರುಸಮೀಕ್ಷೆಗೆ ಒಪ್ಪಿಗೆ ಕೊಟ್ಟಿದ್ದೇವೆ. ಸೆಕ್ಷನ್ 11 ರ ಪ್ರಕಾರ ಜಾತಿ ಗಣತಿಗೆ 10 ವರ್ಷವಾಗಿದೆ ಎಂದು ಬೇಕಾದಷ್ಟು ಜನ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಬಹುದು. 11.04.2015 ಅಲ್ಲಿ ಜಾತಿಗಣತಿ ಪ್ರಾರಂಭವಾಗಿ 30.05.2015 ರಲ್ಲಿ ಮುಗಿದಿತ್ತು. ಈ ವರ್ಷ ಫೆ. 29 ರಂದು ಜಾತಿಗಣತಿ ವರದಿ ಸಲ್ಲಿಕೆಯಾಗಿತ್ತು. ನಂತರ ಕ್ಯಾಬಿನೆಟ್ ನಲ್ಲಿ 5-6 ಬಾರಿ ಇದರ ಬಗ್ಗೆ ಚರ್ಚೆ ಮಾಡಲಾಗಿತ್ತು. ವಿರೋಧ ಪಕ್ಷದವರು ಸಹ ಮರು ಗಣತಿಗೆ ಒತ್ತಾಯ ಮಾಡುತ್ತಿದ್ದರು. ಈ ಮದ್ಯೆ ಹೈಕಮಾಂಡ್ ಅವರು ನಮ್ಮನ್ನು ಕರೆಸಿ ಈ ಬಗ್ಗೆ ಒಂದಷ್ಟು ಮಾರ್ಗದರ್ಶನ ನೀಡಿದ್ದಾರೆ” ಎಂದರು.

ಲಿಂಗಾಯತ ಮತ್ತು ಒಕ್ಕಲಿಗರಿಂದ ಈ ಹಿಂದೆ ವಿರೋಧ ವ್ಯಕ್ತವಾದ ಬಗ್ಗೆ ಕೇಳಿದಾಗ, “ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಮಾಜದ ಎಲ್ಲರನ್ನು ಒಳಗೊಂಡ ಸಮೀಕ್ಷೆ ಇದಾಗಲಿದೆ. ಹೊರನಾಡು ಕನ್ನಡಿಗರಿಗೆ ಆನ್ ಲೈನ್ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಕಲ್ಪಿಸಲಾಗುವುದು” ಎಂದು ಹೇಳಿದರು.

ಹೈಕಮಾಂಡ್ ತೀರ್ಮಾನದಂತೆ ಮರು ಸಮೀಕ್ಷೆ ಮಾಡಲಾಗಿದೆಯೇ ಎಂದು ಕೇಳಿದಾಗ, “ಹೈಕಮಾಂಡ್ ನಮಗೆ ಮಾರ್ಗದರ್ಶನ ಮಾತ್ರ ನೀಡಿದೆ. 10 ವರ್ಷಗಳು ಆಗಿರುವ ಕಾರಣಕ್ಕೆ ಸಮಾಜದ ಎಲ್ಲರನ್ನು ಒಳಗೊಳ್ಳುವುದು ನಮ್ಮ ಉದ್ದೇಶ. ಇದು ಕಾಂಗ್ರೆಸ್ ಪಕ್ಷದ ಮೂಲ ಆಶಯ” ಎಂದರು.

DK Shivakumar
ಹೊಸದಾಗಿ ಜಾತಿ ಗಣತಿ ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಿಸುವ ಪಿತೂರಿ: ಶೋಭಾ ಕರಂದ್ಲಾಜೆ

ವಿಮಾನ ದುರಂತ ಆಘಾತ ತಂದಿದೆ

ಅಹಮದಬಾದ್ ವಿಮಾನ ದುರಂತದ ಬಗ್ಗೆ ಕೇಳಿದಾಗ, “ಈ ಘಟನೆಯ ಬಗ್ಗೆ ಕೇಳಿ ನಾನು ಆಘಾತಕ್ಕೆ ಒಳಗಾಗಿದ್ದೇನೆ. ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ಜಗತ್ತಿಗೆ ಹಾಗೂ ದೇಶಕ್ಕೆ ಇದು ಆಘಾತಕಾರಿ ಸುದ್ದಿ. ಹೆಚ್ಚಿನ ಸಾವು ಆಗದಿರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಕರ್ನಾಟಕದ ಸರ್ಕಾರದ ಹಾಗೂ ಪಕ್ಷದ ಸಹಾನುಭೂತಿ ಹಾಗೂ ಪ್ರಾರ್ಥನೆ ಇದ್ದೇ ಇರುತ್ತದೆ. ದೇಶದಲ್ಲಿ ವಿಮಾನಯಾನ ಕ್ಷೇತ್ರ ಅಭಿವೃದ್ಧಿ ಕಾಣುತ್ತಿತ್ತು. ಆದರೆ ಈ ದುರಂತ ನಡೆಯಬಾರದಿತ್ತು” ಎಂದು ವಿಷಾದ ವ್ಯಕ್ತಪಡಿಸಿದರು.

ವಿಮಾನದಲ್ಲಿ ಕನ್ನಡಿಗರು ಇದ್ದರು ಎಂದು ಕೇಳಿದಾಗ, “ಕನ್ನಡಿಗರು ಜೊತೆಗೆ ಅವರು ಭಾರತೀಯರು. ಇಲ್ಲಿ ಮಾನವೀಯತೆ ಮುಖ್ಯ. ತಮಿಳು, ಗುಜರಾತಿ, ಕನ್ನಡಿಗರು ಎಂಬುದು ಬೇಡ. ಅವರೆಲ್ಲರು ನಮ್ಮ ದೇಶದವರು ಅವರ ಉಳಿವಿಗೆ ನಾವು ಪ್ರಾರ್ಥನೆ ಮಾಡೋಣ” ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com