
ಗುಜರಾತಿನ ಅಹ್ಮದಾಬಾದ್ ನಗರದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಪ್ರಯಾಣಿಕರು, ವಿಮಾನ ಸಿಬ್ಬಂದಿ ಸೇರಿದಂತೆ 240ಕ್ಕೂ ಅಧಿಕ ಮಂದಿ ಸಾವಿಗೀಡಾದ ಸುದ್ದಿ ಕೇಳಿ ಅತೀವ ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಮೃತರ ಕುಟುಂಬಸ್ಥರಿಗೆ ಮತ್ತು ಬಂಧುಮಿತ್ರರಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಈ ದುರ್ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.
ತಮ್ಮವರನ್ನು ಕಳೆದುಕೊಂಡ ಜನರ ನೋವು-ಸಂಕಟ ಕಂಡು ಮನಸ್ಸು ಮಮ್ಮಲ ಮರುಗುತ್ತಿದೆ. ಈ ನೋವಿನ ಘಳಿಗೆಯಲ್ಲಿ ಇಡೀ ದೇಶ ಅವರ ಜೊತೆಗಿದೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಜೊತೆಗೆ ಉನ್ನತ ಮಟ್ಟದ ತನಿಖೆ ನಡೆಸಿ, ಘಟನೆಗೆ ಕಾರಣಗಳನ್ನು ಪತ್ತೆಮಾಡಿ, ಮತ್ತೆಂದೂ ಇಂತಹ ಅವಘಡಗಳು ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಆದ್ಯತೆ ಮೇರೆಗೆ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
246 ಮಂದಿ ಸಾವು
ಈ ದುರಂತದಲ್ಲಿ ಒಟ್ಟು 246 ಮಂದಿ ಸಾವಿಗೀಡಾಗಿದ್ದು, ಈ ಪೈಕಿ 229 ವಿಮಾನ ಪ್ರಯಾಣಿಕರು, 10 ಮಂದಿ ವಿಮಾನ ಸಿಬ್ಬಂದಿ, ಇಬ್ಬರು ಪೈಲಟ್ ( ಮುಖ್ಯ ಪೈಲಟ ಸುಮಿತ್ ಸಭರ್ವಾಲ್ ಮತ್ತು ಕೋ ಪೈಲಟ್ ಕ್ಲೈವ್ ಕುಂದರ್) ಗಳು ಸೇರಿದ್ದರು. ವಿಮಾನದಲ್ಲಿದ್ದ 242 ಜನರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಇದ್ದರು ಎಂದು ತಿಳಿದುಬಂದಿದೆ. ಇದಲ್ಲದೆ ವಿಮಾನ ಢಿಕ್ಕಿಯಾದ ಬಿಜೆ ವೈದ್ಯಕೀಯ ಕಾಲೇಜಿನ 5 ಮಂದಿ ಹಾಸ್ಟೆಲ್ ವಿದ್ಯಾರ್ಥಿಗಳೂ ಸಾವನ್ನಪ್ಪಿದ್ದಾರೆ. ದುರಂತ ನಡೆದ ಸಂದರ್ಭದಲ್ಲಿ ವಿಮಾನ ಕೇವಲ 825 ಅಡಿ ಎತ್ತರದಲ್ಲಿತ್ತು ಎನ್ನಲಾಗಿದೆ.
ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ನಿಧನ
ಇದೇ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ವಿಜಯ್ ರೂಪಾನಿ ಅವರು ಕುಟುಂಬ ಸದಸ್ಯರ ಭೇಟಿ ಮಾಡಲು ಲಂಡನ್ ತೆರಳುತಿದ್ದರು ಎಂದು ತಿಳಿದುಬಂದಿದೆ.
Advertisement