
ಹುಬ್ಬಳ್ಳಿ: ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದ ಹುಸೇನಸಾಬ್ ಕಳಸ ಕುಟುಂಬದ ಸದಸ್ಯರಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಶನಿವಾರ 5 ಲಕ್ಷ ರೂ. ಪರಿಹಾರದ ಆದೇಶವನ್ನು ಹಸ್ತಾಂತರಿಸಿದರು.
ಹುಬ್ಬಳ್ಳಿ ಹೊರವಲಯದ ಮಾವನೂರು ರಸ್ತೆಯ ಬಳಿ ಬುಧವಾರ ರಾತ್ರಿ ಹುಸೇನಸಾಬ್ ಅವರು ಮಳೆನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದರು.
ಇಂದು ಹುಸೇನಸಾಬ್ ಅವರ ಮನೆಗೆ ತೆರಳಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿ, ಪರಿಹಾರದ ಆದೇಶದ ಪ್ರತಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂತೋಷ್ ಲಾಡ್, ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಇಲ್ಲಿಯವರೆಗೆ ಒಟ್ಟು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಬೆಳೆ ನಷ್ಟದ ಬಗ್ಗೆ ಸರ್ವೇ ಮಾಡಬೇಕಾಗಿದೆ ಎಂದು ತಿಳಿಸಿದರು. ಅಲ್ಲದೆ ಸರ್ವೇ ಮುಗಿದ ನಂತರ, ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಜೂನ್ 12 ರಂದು, ಹುಬ್ಬಳ್ಳಿಯ ಹೊರವಲಯದ ಮಾವನೂರು ರಸ್ತೆಯ ಬಳಿಯ ತಗ್ಗು ಪ್ರದೇಶದಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆ ಮತ್ತು ಬಲವಾದ ಗಾಳಿಯ ನಂತರ, ಹುಸೇನಸಾಬ್ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ.
ಇನ್ನು ಹೆಚ್ಚಿನ ಮಳೆಯಾದಗ ಬೆಣ್ಣೆಹಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಪ್ರತಿ ಬಾರಿ ಕೂಡಾ ಸಾವಿರಾರು ಎಕರೆಯಲ್ಲಿ ಬೆಳದಿದ್ದ ಬೆಳೆ ಹಾಳಾಗಿ ಹೋಗುತ್ತದೆ. ಹೀಗಾಗಿ ಬೆಣ್ಣೆಹಳ್ಳದಲ್ಲಿ ಉಂಟಾಗುತ್ತಿರುವ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದರ ಜೊತೆಗೆ, ಬೆಳೆಹಾನಿಯಾದ ರೈತರಿಗೆ ಪರಿಹಾರ ಕೊಡಿಸುವ ಕೆಲಸ ಕೂಡಾ ಆಗಬೇಕಿದೆ ಎಂದು ಸಚಿವರು ಹೇಳಿದ್ದಾರೆ.
ಘಟನೆಯ ಕುರಿತು ಎಎನ್‌ಐ ಜೊತೆ ಮಾತನಾಡಿದ ಹುಬ್ಬಳ್ಳಿ ತಾಲೂಕು ತಹಶೀಲ್ದಾರ್ ಕಲ್ಲನಗೌಡ ಪಾಟೀಲ್ , "ಆ ವ್ಯಕ್ತಿಯನ್ನು ಪತ್ತೆಹಚ್ಚಲು ಅಗ್ನಿಶಾಮಕ ದಳದವರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ 10 ಗಂಟೆಗಳಿಂದ ಕಾರ್ಯಾಚರಣೆ ಮುಂದುವರೆದಿದೆ. ನಿನ್ನೆ ರಾತ್ರಿ ಸುಮಾರು 150 ಮಿ.ಮೀ ಮಳೆಯಾಗಿದೆ. ಇಂದು ಹುಬ್ಬಳ್ಳಿಯಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಬುಧವಾರ ಭಾರೀ ಮಳೆಯ ನಂತರ ತನ್ನ ಜಮೀನಿಗೆ ತೆರಳಿದ್ದ ಕಾಣೆಯಾದ ಹುಸೇನಸಾಬ್ ಅವರ ಚಪ್ಪಲಿಗಳು ಪತ್ತೆಯಾಗಿವೆ" ಎಂದು ಹೇಳಿದ್ದಾರೆ.
Advertisement