ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜೂನ್ 16ರವರೆಗೆ ಮಧ್ಯಂತರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
ರಾಜ್ಯದಲ್ಲಿ ನೈಋತ್ಯ ಮಾನ್ಸೂನ್ ಸಕ್ರಿಯವಾಗಿರುವುದರಿಂದ, ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಕರಾವಳಿ ಭಾಗದಲ್ಲಿ ಜೂನ್.15ರಂದು ಭಾರೀ ಮಳೆಯಾಗುವ ಸಾಧ್ಯತೆಗಳಿರುವುದರಿಂದ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಜೂನ್ 17 ರಿಂದ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆಯಿದ್ದು, ಜೂನ್ 18 ರವರೆಗೆ ಹಗುರದಿಂದ ಮಧ್ಯಮ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ. ರಾಜ್ಯದ ಇತರ ಸ್ಥಳಗಳಿಗೆ, ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಂತಹ ಕರಾವಳಿ ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಿದೆ.
ತನ್ನ ಕಚೇರಿಯ ಮುಂದೆ ಬಸ್ ನಿಲ್ಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ ಚಾಲಕನ ಮೇಲೆ ಮಹಿಳಾ ಟೆಕ್ಕಿಯೊಬ್ಬರು ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಸರ್ಜಾಪುರ ರಸ್ತೆಯ ಕೈಕೊಂಡರಹಳ್ಳಿಯಲ್ಲಿ ನಡೆದಿದೆ.
ಕೈಕೊಂಡರಹಳ್ಳಿ ಬಸ್‌ನಿಲ್ದಾಣದಲ್ಲಿ ಟಿಕೆಟ್ ತೆಗೆದುಕೊಂಡಿದ್ದ ಮಹಿಳೆ, ತನ್ನ ಕಚೇರಿಯ ಮುಂದೆ ಬಸ್ ನಿಲ್ಲಿಸುವಂತೆ ಚಾಲಕನಿಗೆ ಒತ್ತಾಯಿಸಿದ್ದಾಳೆ. ಆದರೆ ನಿಯಮಗಳ ಕಾರಣದಿಂದ ಚಾಲಕ ಬಸ್ ನಿಲ್ಲಿಸಿಲ್ಲ. ನಂತರ ಮಹಿಳೆ ಹೊಟ್ಟೆನೋವಿನಿಂದ ಕಿರುಚಿಕೊಂಡು ಬಸ್ ನಿಲ್ಲಿಸುವಂತೆ ಮಹಿಳೆ ಒತ್ತಾಯಿಸಿದ್ದಾಳೆ. ಇದಕ್ಕೆ ಸ್ಪಂದಿಸಿದ ಚಾಲಕ, ಬಲಕ್ಕೆ ತಿರುವು ತೆಗೆದುಕೊಂಡು ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಕಾವ್ಯ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಲು ಶುರು ಮಾಡಿದ್ದಾರೆ. ಚಾಲಕ ಅಸಭ್ಯ ಭಾಶಣೆ ಬಳಸದಂತೆ ಹಾಗೂ ಬಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಎಚ್ಚರಿಸಿದ ಹೊರತಾಗಿಯೂ ಮಹಿಳೆ ಚಾಲನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಘಟನೆ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.
ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ 'ಕಾಂತಾರ-1' ಚಿತ್ರೀಕರಣದ ವೇಳೆ ಮತ್ತೊಂದು ಅವಘಡ ಸಂಭವಿಸಿದ್ದು, ದೋಣಿ ಮಗುಚಿ ಬಿದ್ದ ಘಟನೆ ವರದಿಯಾಗಿದೆ. ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ 'ಕಾಂತಾರ'-1 ಚಿತ್ರದ ಕೊನೆ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ರಿಷಬ್ ಶೆಟ್ಟಿ ಸೇರಿ 30 ಜನ ಕಲಾವಿದರಿದ್ದ ದೋಣಿ ಇದ್ದಕ್ಕಿದ್ದಂತೆ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಕಲಾವಿದರು, ತಂತ್ರಜ್ಞರು ಎಲ್ಲರೂ ಈಜಿ ದಡ ಸೇರಿದ್ದಾರೆ. ಬೋಟ್‌ನಲ್ಲಿದ್ದವರು ಬಚಾವಾದರೂ ಕ್ಯಾಮೆರಾ ಇನ್ನಿತರೆ ಸೆಟ್ ಪ್ರಾಪರ್ಟಿಗಳು ನೀರು ಪಾಲಾಗಿದೆ. ಘಟನೆ ಬೆನ್ನಲ್ಲೇ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಸಲಾಗಿದೆ. ಶೂಟಿಂಗ್ ವೇಳೆ ಸಾಲು ಸಾಲು ಅವಘಡಗಳು ಸಂಭವಿಸುತ್ತಿರುವುದರಿಂದ ಚಿತ್ರತಂಡ, ಶೂಟಿಂಗ್ಗೆ ಎಲ್ಲ ರೀತಿಯ ಪರವಾನಗಿಗಳನ್ನು ತೆಗೆದುಕೊಂಡಿದೆಯೇ, ಚಿತ್ರೀಕರಣದ ವೇಳೆ ಅಗತ್ಯ ಭದ್ರತಾ ಎಚ್ಚರಿಕೆಗಳನ್ನು ವಹಿಸಿದೆಯೇ ಎಂದು ಪರೀಕ್ಷಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ಮುಂದಾಗಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ NEET-UG ಫಲಿತಾಂಶಗಳನ್ನು ಪ್ರಕಟಿಸಿದ್ದು. ಟಾಪ್ 100 ರಲ್ಲಿ ಇಬ್ಬರು ಹುಡುಗಿಯರು ಸೇರಿದಂತೆ ಏಳು ಮಂದಿ ಕರ್ನಾಟಕದ ವಿದ್ಯಾರ್ಥಿಗಳಿದ್ದಾರೆ. ಈ ವಿದ್ಯಾರ್ಥಿಗಳು ಶೇ.99.99 ಅಂಕಗಳನ್ನು ಗಳಿಸಿದ್ದಾರೆ. ಒಟ್ಟು 1.42 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಅವರಲ್ಲಿ 83,500 ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ರಾಜಸ್ಥಾನದ ಮಹೇಶ್ ಕುಮಾರ್ ಅಖಿಲ ಭಾರತ ಮಟ್ಟದಲ್ಲಿ ಟಾಪರ್ ಆಗಿದ್ದಾರೆ. ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ನಿಖಿಲ್ ಸೊನ್ನಾದ್ ರಾಜ್ಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಜಾತಿ ಜನಗಣತಿ ನಡೆಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೇ ಹೊರತು ರಾಜ್ಯ ಸರ್ಕಾರಕ್ಕಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯನ್ನು ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು, ಕೇಂದ್ರ ಸರ್ಕಾರ ಅದನ್ನು ಮಾಡುತ್ತಿದೆ. ಹೀಗಾಗಿ, ಕರ್ನಾಟಕ ಸರ್ಕಾರ ಜಾತಿಗಣತಿ ನಡೆಸುವ ಅಗತ್ಯವಿಲ್ಲ. ಬದಲಿಗೆ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಲಿ ಎಂದು ಸಲಹೆ ನೀಡಿದ್ದಾರೆ. ವಿಪಕ್ಷಗಳ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಜಾತಿಗಣತಿಗೆ ಮುಂದಾಗಿದೆ ಎಂಬ ವರದಿಗಳನ್ನೂ ಕೇಂದ್ರ ಸಚಿವರು ನಿರಾಕರಿಸಿದ್ದಾರೆ. ಜಾತಿಗಣತಿ ನಡೆಸುವ ನಿರ್ಧಾರ ಪ್ರಧಾನಿ ಮೋದಿಯವರ ಸ್ವಂತ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
Advertisement