
ಬೆಂಗಳೂರು: ಕರ್ನಾಟಕದ ಏಳು ವಿದ್ಯಾರ್ಥಿಗಳು ನೀಟ್-ಯುಜಿ 2025 ಪರೀಕ್ಷೆಯಲ್ಲಿ ಶೇಕಡಾವಾರು 99.99 ಗಳಿಸಿ ಟಾಪ್ 100 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಫಲಿತಾಂಶಗಳನ್ನು ನಿನ್ನೆ ಬಿಡುಗಡೆ ಮಾಡಿದೆ.
ಅತಿ ಹೆಚ್ಚು ಸಾಧನೆ ಮಾಡಿದವರಲ್ಲಿ ನಿಖಿಲ್ ಸೊನ್ನಾದ್ (AIR 17), ರುಚಿರ್ ಗುಪ್ತಾ (AIR 22), ತೇಜಸ್ ಶೈಲೇಶ್ ಘೋಟ್ಗಲ್ಕರ್ (AIR 38), ಪ್ರಾಂಶು ಜಹಾಗಿರ್ದಾರ್ (AIR 42), ಹರಿಣಿ ಶ್ರೀರಾಮ್ (AIR 72), ದಿಗಂತ್ ಎಸ್ (AIR 80), ಮತ್ತು ನಿಧಿ ಕೆಜಿ (AIR 84) ಸೇರಿದ್ದಾರೆ. ದೇಶದ ಟಾಪ್ 20 ಮಹಿಳಾ ಅಭ್ಯರ್ಥಿಗಳಲ್ಲಿ ಹರಿಣಿ ಮತ್ತು ನಿಧಿ ಸೇರಿದ್ದಾರೆ, ಆದರೆ ಪುರುಷ ಅಭ್ಯರ್ಥಿಗಳಲ್ಲಿ ನಿಖಿಲ್ ಮತ್ತು ರುಚಿರ್ ಟಾಪ್ 20 ರಲ್ಲಿದ್ದಾರೆ.
ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ನಿಖಿಲ್ ಸೊನ್ನಾದ್ ಕೂಡ ರಾಜ್ಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ವೈದ್ಯಕೀಯ ಕುಟುಂಬದಿಂದ ಬಂದಿರುವ ನಿಖಿಲ್, ನರಶಸ್ತ್ರಚಿಕಿತ್ಸಕ ಡಾ. ಸಿದ್ದಪ್ಪ ಸೊನ್ನಾದ್ ಮತ್ತು ನೇತ್ರಶಾಸ್ತ್ರಜ್ಞ ಡಾ. ಮೀನಾಕ್ಷಿ ಅವರ ಪುತ್ರ.
ನಾನು ಆರಂಭದಿಂದಲೇ ನೀಟ್ ಪರೀಕ್ಷೆಗೆ ಭದ್ರ ಬುನಾದಿ ಹಾಕುವತ್ತ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಿದೆ. ಅದು ನನಗೆ ಪರಿಕಲ್ಪನೆಗಳನ್ನು ಉತ್ತಮವಾಗಿ ಅನ್ವಯಿಸಲು ಸಹಾಯ ಮಾಡಿತು ಎಂದು ವಿಜಯಪುರದ ನಿಖಿಲ್ ಹೇಳುತ್ತಾರೆ. ನನಗೆ ಉತ್ತಮ ಅಂಕ ಬರುವ ನಿರೀಕ್ಷೆಯಿತ್ತು ಆದರೆ ಅಖಿಲ ಭಾರತ ಮಟ್ಟದಲ್ಲಿ 17ನೇ ರ‍್ಯಾಂಕ್ ಬರುತ್ತದೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ ಎನ್ನುತ್ತಾರೆ.
ಕೊಡಗಿನ ಸೋಮವಾರಪೇಟೆಯ ಎಕ್ಸ್‌ಪರ್ಟ್ ಪಿಯು ಕಾಲೇಜಿನ ನಿಧಿ ಕೆಜಿ, ಭಾರತ ಮಟ್ಟದಲ್ಲಿ 84 ರ್ಯಾಂಕ್ ನೊಂದಿಗೆ ಟಾಪ್ 100 ರೊಳಗೆ ಸ್ಥಾನ ಪಡೆದಿದ್ದಾರೆ. ಸಹಾಯಕ ಸಬ್-ಇನ್‌ಸ್ಪೆಕ್ಟರ್ ಕೆ.ಎಚ್. ಗಣಪತಿ ಮತ್ತು ಶಾಲಾ ಶಿಕ್ಷಕಿ ಗುಣವತಿ ಅವರ ಪುತ್ರಿ ನಿಧಿ, ವೈದ್ಯೆಯಾಗುವ ತನ್ನ ಗುರಿ 9 ನೇ ತರಗತಿಯಲ್ಲಿ ಪ್ರಾರಂಭವಾಯಿತು ಎಂದು ಹೇಳುತ್ತಾರೆ.
ಕಳೆದ ಎರಡು ವರ್ಷಗಳಿಂದ, ಟಾಪ್ 100ಕ್ಕಿಂತ ಒಳಗೆ ರ‍್ಯಾಂಕ್ ಪಡೆಯುವ ಗುರಿಯೊಂದಿಗೆ ನೀಟ್ ನತ್ತ ಸಂಪೂರ್ಣವಾಗಿ ಗಮನಹರಿಸಿದ್ದೆ. ಪರೀಕ್ಷೆ ಕಠಿಣವಾಗಿತ್ತು, ಆದರೆ ನಾನು ಅದಕ್ಕೆ ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು. ನಿಧಿ ತನ್ನ ಎಂಬಿಬಿಎಸ್ ನ್ನು ಏಮ್ಸ್ ದೆಹಲಿ ಅಥವಾ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಮುಂದುವರಿಸಲು ಆಶಿಸುತ್ತಾರೆ.
ತನ್ನ ಮೊದಲ ಪ್ರಯತ್ನದಲ್ಲಿ 22 ನೇ ಆಲ್ ಇಂಡಿಯಾ ರ‍್ಯಾಂಕ್ (AIR) ಪಡೆದ ರುಚಿರ್ ಗುಪ್ತಾ, ಬೆಂಗಳೂರಿನ ಅಲೆನ್ ಇನ್ಸ್ಟಿಟ್ಯೂಟ್‌ನಲ್ಲಿ NEET-UG ಗೆ ತಯಾರಿ ನಡೆಸಿದರು. ಅವರ ದೈನಂದಿನ ಗುರಿಗಳನ್ನು ಹೊಂದಿಸುವುದು ಮತ್ತು ಅವುಗಳನ್ನು ಪೂರ್ಣಗೊಳಿಸುವುದನ್ನು ಗುರಿಯಾಗಿಸಿಕೊಂಡು ಪರೀಕ್ಷೆಗೆ ಅಭ್ಯಾಸ ನಡೆಸಿದರು.
ದೆಹಲಿ ಏಮ್ಸ್ ಗೆ ಸೇರುವ ಆಶಯದೊಂದಿಗೆ, ಪ್ರಸ್ತುತ ಐಐಟಿ ಬಾಂಬೆಯಲ್ಲಿ ಓದುತ್ತಿರುವ ಅಣ್ಣನಿಂದಲೂ ಸಲಹೆಗಳನ್ನು ಪಡೆಯುತ್ತಿರುತ್ತಾರೆ. ತಯಾರಿ ಹೇಗೆ ಮಾಡಿಕೊಳ್ಳುವುದು, ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಮತ್ತು ನನಗೆ ಸುಧಾರಣೆ ಅಗತ್ಯವಿರುವ ಕ್ಷೇತ್ರಗಳನ್ನು ಗುರುತಿಸುವುದು ಹೇಗೆ ಎಂಬುದರ ಕುರಿತು ಅಣ್ಣ ನನಗೆ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಈ ವರ್ಷ, ಕರ್ನಾಟಕದಲ್ಲಿ 1,47,782 ವಿದ್ಯಾರ್ಥಿಗಳು NEET-UG ಗೆ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 1,42,369 ವಿದ್ಯಾರ್ಥಿಗಳು ಹಾಜರಾಗಿ, 83,582 ವಿದ್ಯಾರ್ಥಿಗಳು ಅರ್ಹತೆ ಪಡೆದರು. ಕಳೆದ ವರ್ಷ 1,55,148 ಜನರು ನೋಂದಾಯಿಸಿಕೊಂಡು, 1,50,170 ಜನರು ಪರೀಕ್ಷೆಗೆ ಹಾಜರಾಗಿದ್ದರು, 88,887 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದರು.
Advertisement