
ದಾವಣಗೆರೆ: ನಮ್ಮ ಸರ್ಕಾರದ ಮುಂಬರುವ ಸಾಮಾಜಿಕ-ಶೈಕ್ಷಣಿಕ ಮತ್ತು ಜಾತಿ ಸಮೀಕ್ಷೆಯು ಕೇಂದ್ರದ ಜಾತಿ ಗಣತಿಗಿಂತ ಸಂಪೂರ್ಣ ಭಿನ್ನವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ರಾಜ್ಯದ ಈ ಉಪಕ್ರಮವು ಸಾಮಾಜಿಕ ನ್ಯಾಯ ಒದಗಿಸುತ್ತದೆ ಎಂದು ಒತ್ತಿ ಹೇಳಿದ್ದಾರೆ.
ಕೇಂದ್ರ ಸರ್ಕಾರ 16ನೇ ಜನಗಣತಿಯೊಂದಿಗೆ ಜಾತಿ ಗಣತಿಯನ್ನು ಮಾರ್ಚ್ 1, 2027 ರಿಂದ ಆರಂಭಿಸುವುದಾಗಿ ಅಧಿಸೂಚನೆ ಹೊರಡಿಸಿದ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಕೇಂದ್ರ ಸರ್ಕಾರ ಜನಗಣತಿಯನ್ನು 2027 ರಿಂದ ಕೈಗೊಳ್ಳುತ್ತಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡುವುದಾಗಿ ಎಲ್ಲೂ ಹೇಳಿಲ್ಲ. ನಾವು ಮಾಡುತ್ತಿರುವುದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ. ಅದರ ಜೊತೆ ಜಾತಿ ಗಣತಿಯೂ ಒಳಗೊಂಡಿದೆ ಎಂದು ಹೇಳಿದರು.
ಕೇಂದ್ರದ ಜನಗಣತಿಗೆ ಕರ್ನಾಟಕ ಸರ್ಕಾರದಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಪುನರುಚ್ಚರಿಸಿದ ಸಿಎಂ, ರಾಜ್ಯದ ಸಮೀಕ್ಷೆಯ ವ್ಯಾಪ್ತಿ ಮತ್ತು ಉದ್ದೇಶವನ್ನು ಒತ್ತಿ ಹೇಳಿದರು.
ಸಾಮಾಜಿಕ ನ್ಯಾಯ ಒದಗಿಸಲು ಜನರ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ತಿಳಿದಿರಬೇಕು. ಅದಕ್ಕಾಗಿ ಮರು ಸಮೀಕ್ಷೆ ಅಗತ್ಯವಿದೆ. ಕೇಂದ್ರ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುತ್ತಿಲ್ಲ ಎಂದರು. ಕೇಂದ್ರ ಸರ್ಕಾರ ಜನಗಣತಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ನಮ್ಮ ಸಮೀಕ್ಷೆಗೂ ಅವರ ಸಾಮೀಕ್ಷೆಗೂ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆಯ ವ್ಯತ್ಯಾಸವಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಪ್ರಕಾರ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಪರಿಣಾಮಕಾರಿ ಕಲ್ಯಾಣ ಕ್ರಮಗಳನ್ನು ತಿಳಿಸುವ ಡೇಟಾವನ್ನು ಸಂಗ್ರಹಿಸುವುದು ರಾಜ್ಯ ಸಮೀಕ್ಷೆಯ ಪ್ರಮುಖ ಉದ್ದೇಶವಾಗಿದೆ.
ವರದಿಯ ಕುರಿತು ಪ್ರಬಲರು ಹಾಗೂ ದುರ್ಬಲರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದುಳಿದ ವರ್ಗಗಳ ಕಾಯ್ದೆಯ ಸೆಕ್ಷನ್ 11 (1 )ರ ಪ್ರಕಾರ ವರದಿಗೆ ಹತ್ತು ವರ್ಷಗಳಾದ ಮೇಲೆ ಮರು ಸಮೀಕ್ಷೆಯಾಗಬೇಕು ಎಂದು ತಿಳಿಸಲಾಗಿದೆ. ಅದಕ್ಕಾಗಿ ಜಾತಿ ಗಣತಿ ಮರು ಸಮೀಕ್ಷೆ ಕೈಗೊಳ್ಳಲಾಗಿದೆ ಎಂದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಮೀಕ್ಷಾ ಕಾರ್ಯ ಆರಂಭಿಸುವಂತೆ ಈಗಾಗಲೇ ಸೂಚನೆ ನೀಡಿದ್ದೇವೆ ಎಂದು ಸಿಎಂ ತಿಳಿಸಿದರು.
Advertisement