
ಬೆಂಗಳೂರು: ಇಂದಿನ ಸೋಷಿಯಲ್ ಮೀಡಿಯಾ ಜಮಾನದಲ್ಲಿ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಏನು ಮಾಡಿದರೂ ಸುದ್ದಿಯಾಗುತ್ತದೆ. ಬಹಳ ಬೇಗನೆ ಫೋಟೋ, ವಿಡಿಯೊಗಳು ವೈರಲ್ ಆಗುತ್ತವೆ. ಡಿಸಿಎಂ ಡಿ ಕೆ ಶಿವಕುಮಾರ್(D K Shivakumar) ಅವರ ವಿಡಿಯೊ ಕೂಡ ಸೋಷಿಯಲ್ ಮೀಡಿಯಾದಲ್ಲಿ ಇಂದು ಸಾಕಷ್ಟು ವೈರಲ್ ಆಗಿದೆ.
ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಕಾರಿಡಾರ್ ನಲ್ಲಿ ವಿಶ್ವ ಪರಿಸರ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪರಿಸರ ಸ್ನೇಹಿ ನಡಿಗೆ ಎಂದು ಕಾರಿಡಾರ್ ಸುತ್ತ ಸೈಕಲ್ ನಲ್ಲಿ ಬೆಳಗ್ಗೆಯೇ ರೌಂಡ್ ಹಾಕಿದರು. ನಂತರ ವಿಧಾನಸೌಧ ಮೆಟ್ಟಿಲು ಬಳಿ ನಿಂತು ಸೈಕಲ್ ನಿಲ್ಲಿಸಿ ಹತ್ತುವಾಗ ಎಡವಿ ಬಿದ್ದರು.
ಕೂಡಲೇ ಎಚ್ಚೆತ್ತುಕೊಂಡ ಡಿ ಕೆ ಶಿವಕುಮಾರ್, 'ಏಯ್ ಇದನ್ನೆಲ್ಲ ಇನ್ನು ತೋರಿಸ್ಬೇಡಿ' ಎಂದು ನಗುತ್ತಾ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು. ಆದರೆ ಅಷ್ಟೊತ್ತಿಗಾಗಲೇ ಅವರು ಬೀಳುವ ದೃಶ್ಯದ ವಿಡಿಯೊ ಶೂಟ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಆಗಿ ವೈರಲ್ ಆಗಿದೆ.
ಹವಾಮಾನ ಕ್ರಿಯಾ ಬಳಗ ಮತ್ತು ಪರಿಸರ ಸಂಘ
ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಿಸಿಎಂ,ಪರಿಸರ ನಮ್ಮ ಮನೆ. ಅದನ್ನು ರಕ್ಷಣೆ ಮಾಡಬೇಕಾದುದು ನಮ್ಮ ಆದ್ಯ ಕರ್ತವ್ಯ. ಪರಿಸರ ಸಂರಕ್ಷಣೆ ಎಂದರೆ ದೇಶದ ರಕ್ಷಣೆಯಂತೆ. ಹಸಿರೇ ಉಸಿರು ಎಂದು ತಿಳಿದು ಮಾರಕ ಪ್ಲಾಸ್ಟಿಕ್ ನಿರ್ಮೂಲನೆ ಮಾಡಬೇಕಾದುದು ನಮ್ಮ- ನಿಮ್ಮೆಲ್ಲರ ಜವಾಬ್ದಾರಿ ಎಂದರು.
ಈಗಾಗಲೇ ಶಾಲೆಗಳಲ್ಲಿ ಕಡ್ಡಾಯವಾಗಿ 25 ವಿದ್ಯಾರ್ಥಿಗಳನ್ನು ಒಳಗೊಂಡಂತೆ ಹವಾಮಾನ ಕ್ರಿಯಾ ಬಳಗ ಮತ್ತು ಪರಿಸರ ಸಂಘಗಳನ್ನು ರಚಿಸಲು ಆದೇಶ ನೀಡಿದ್ದೇನೆ. ಒಂದೊಂದು ಶಾಲೆ ಒಂದೊಂದು ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು, ಒಬ್ಬೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡ ನೆಟ್ಟು ಪೋಷಿಸಬೇಕು. ಹವಾಮಾನ, ಇಲ್ಲಿನ ಹಸಿರು ಪರಿಸರ ಬೆಂಗಳೂರಿನ ಆಸ್ತಿ. ಈ ಗಾರ್ಡನ್ ಸಿಟಿಯ ಹೆಸರನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗೊಣ; ಹಸಿರ ಹಾದಿಯಲ್ಲಿ ನಡೆಯೋಣ ಎಂದು ಕರೆ ನೀಡಿದರು.
Advertisement