
ಬೆಂಗಳೂರು: ವೈದ್ಯರಾಗಬೇಕೆಂಬ ಕನಸು ಹೊತ್ತು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೋಸದ ಬಲೆಗೆ ಬೀಳಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಮಂಗಳವಾರ ಹೇಳಿದ್ದಾರೆ.
ವೈದ್ಯಕೀಯ ಸೀಟು ಕೊಡಿಸುವ ಸುಳ್ಳು ಭರವಸೆಗಳೊಂದಿಗೆ ವಿದ್ಯಾರ್ಥಿಗಳು ಅಥವಾ ಪೋಷಕರನ್ನು ದಾರಿ ತಪ್ಪಿಸುತ್ತಿರುವ ಮಧ್ಯವರ್ತಿಗಳನ್ನು ಗುರುತಿಸಿ ಕಾನೂನಿನ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.
ವೈದ್ಯರಾಗುವ ಕನಸಿನಿಂದಾಗಿ ಕಷ್ಟಪಟ್ಟು ಅಧ್ಯಯನ ಮಾಡಿ ನೀಟ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು, ಆತಂಕದಿಂದ ವಂಚಕರ ಬಲೆಗೆ ಬೀಳಬಾರದು ಎಂದು ಸಚಿವರು ಹೇಳಿದ್ದಾರೆ.
ಕೆಲವರು ವೈದ್ಯಕೀಯ ಸೀಟು ಕೊಡಿಸುವ ಸುಳ್ಳು ಭರವಸೆ ನೀಡುತ್ತಿದ್ದಾರೆ. ಅವರು ತಮ್ಮ "ಸಂಪರ್ಕ" ಅಥವಾ "ಪ್ರಭಾವ"ವನ್ನು ಬಳಸಿಕೊಂಡು ಕೆಲವು ಕಾಲೇಜುಗಳಲ್ಲಿ ಪ್ರವೇಶ ಕೊಡಿಸುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಹಣ ಪಡೆದು ವಂಚಿಸಿ ಕಣ್ಮರೆಯಾಗುತ್ತಾರೆ ಎಂದು ಸಚಿವರು ಎಚ್ಚರಿಸಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 1,47,782 ಅಭ್ಯರ್ಥಿಗಳು ನೀಟ್‌ಗೆ ನೋಂದಾಯಿಸಿಕೊಂಡಿದ್ದಾರೆ ಮತ್ತು 1,42,369 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಈ ಪೈಕಿ 83,582 ವಿದ್ಯಾರ್ಥಿಗಳು ಇತ್ತೀಚೆಗೆ ಪ್ರಕಟವಾದ ಫಲಿತಾಂಶದಲ್ಲಿ ಅರ್ಹತೆ ಪಡೆದಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
"ಉನ್ನತ ಕಾಲೇಜಿನಲ್ಲಿ ಸೀಟು ಪಡೆಯಲು ಆತುರ ಅಥವಾ ಆತಂಕದಿಂದ ವರ್ತಿಸಬೇಡಿ. ಮಧ್ಯವರ್ತಿಗಳು ನಿಮ್ಮ ಹತಾಶೆಯನ್ನು ಬಳಸಿಕೊಳ್ಳಲು ಕಾಯುತ್ತಿದ್ದಾರೆ. ಜಾಗರೂಕರಾಗಿರಿ ಮತ್ತು ಅವರ ವಂಚನೆಗೆ ಬಲಿಯಾಗಬೇಡಿ" ಎಂದು ಸಚಿವರು ಕಿವಿಮಾತು ಹೇಳಿದ್ದಾರೆ.
ಎಲ್ಲಾ ಸೀಟು ಹಂಚಿಕೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮೂಲಕ ವ್ಯವಸ್ಥಿತ ಮತ್ತು ಪಾರದರ್ಶಕ ರೀತಿಯಲ್ಲಿ ಮಾಡಲಾಗುತ್ತದೆ ಎಂದು ಪಾಟೀಲ್ ಹೇಳಿದರು.
"ವಿದ್ಯಾರ್ಥಿಗಳು ಮತ್ತು ಪೋಷಕರು ಈ ಅಧಿಕೃತ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ಅವರು ಹೇಳಿದರು.
Advertisement