
ಬೆಂಗಳೂರು: ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಮಂಗಳವಾರ ಅನುಮತಿ ನೀಡಿದ ನಂತರ, ಕನ್ನಡ ಪರ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಚಿತ್ರವನ್ನು ಬಹಿಷ್ಕರಿಸುವಂತೆ ಕನ್ನಡಿಗರಿಗೆ ಮನವಿ ಮಾಡಿದೆ.
"ಕಮಲ್ ಹಾಸನ್ ಭಾಷಾಶಾಸ್ತ್ರಜ್ಞನೂ ಅಲ್ಲ, ಇತಿಹಾಸಕಾರನೂ ಅಲ್ಲ. ಆದರೂ ನಮ್ಮ ಭಾಷೆಗೆ ಅಗೌರವ ತೋರಿದ್ದಾರೆ. ಹೀಗಾಗಿ ಸ್ವಾಭಿಮಾನಿ ಕನ್ನಡಿಗರು ಈ ಚಿತ್ರವನ್ನು ಏಕೆ ನೋಡುತ್ತಾರೆ? ಎಂದು ಕರವೇ ರಾಜ್ಯಾಧ್ಯಕ್ಷ ಎಚ್. ಶಿವರಾಮಗೌಡ ಅವರು ಹೇಳಿದ್ದಾರೆ.
ನ್ಯಾಯಮೂರ್ತಿಗಳಾದ ಉಜ್ಜಲ್ ಭೂಯಾನ್ ಮತ್ತು ಮನಮೋಹನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು 'ಥಗ್ ಲೈಫ್' ಚಿತ್ರ ಸುರಕ್ಷಿತವಾಗಿ ಮತ್ತು ಯಾವುದೇ ಅಡೆತಡೆಯಿಲ್ಲದೆ ಬಿಡುಗಡೆಗೆ ಅವಕಾಶ ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸುಪ್ರೀಂ ಕೋರ್ಟ್ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಆದರೆ ಇಲ್ಲಿ ಬಿಡುಗಡೆಯಾದಾಗ ಕರ್ನಾಟಕದ ಜನ ಆ ಚಿತ್ರ ಚಿತ್ರವನ್ನು ಬಹಿಷ್ಕರಿಸುವಂತೆ ಮನವಿ ನಾವು ಮನವಿ ಮಾಡುತ್ತೇವೆ ಎಂದು ಶಿವರಾಮಗೌಡರು ಹೇಳಿದ್ದಾರೆ.
ಈ ವಿಷಯವು ಚಿತ್ರದ ಬಗ್ಗೆ ಅಲ್ಲ, ಇದು ಕನ್ನಡ ಭಾಷೆಯ ಕುರಿತು ನಟ ಕಮಲ್ ಹಾಸನ್ ಅವರ ಹೇಳಿಕೆಯ ಬಗ್ಗೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ(ಕೆಎಫ್‌ಸಿಸಿ) ಅಧ್ಯಕ್ಷ ಎಂ. ನರಸಿಂಹಲು ಅವರು ತಿಳಿಸಿದ್ದಾರೆ.
"ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಮತ್ತು ಅವರು ನಮಗೆ ಏನು ಹೇಳುತ್ತಾರೋ ಅದನ್ನು ನಾವು ಅನುಸರಿಸುತ್ತೇವೆ. ಆದರೆ ನಾವು ಕನ್ನಡ ಜನ, ಸರ್ಕಾರ ಮತ್ತು ಕನ್ನಡ ಪರ ಸಂಘಟನೆಗಳೊಂದಿಗೆ ನಿಲ್ಲುತ್ತೇವೆ. ಅವರ ಹೇಳಿಕೆ ನಮ್ಮ ಭಾವನೆಗಳಿಗೆ ನೋವುಂಟು ಮಾಡಿದೆ. ಆದ್ದರಿಂದ, ಈ ವಿಷಯವು ಚಿತ್ರದ ಬಗ್ಗೆ ಅಲ್ಲ, ಅದು ಅವರು ಹೇಳಿದ ವಿಷಯದ ಬಗ್ಗೆ" ಎಂದು ನರಸಿಂಹಲು ಪಿಟಿಐಗೆ ತಿಳಿಸಿದ್ದಾರೆ.
ಜೂನ್ 5 ರಂದು ಚಿತ್ರವನ್ನು ಬಿಡುಗಡೆ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದು ಕಮಲ್ ಹಾಸನ್ ಅವರೇ. ಅವರ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಮಾತ್ರ ನಾವು ಬಯಸಿದ್ದೇವೆ" ಎಂದು ಅವರು ಹೇಳಿದರು.
ಕೆಎಫ್‌ಸಿಸಿಯ ಮಾಜಿ ಅಧ್ಯಕ್ಷ ಮತ್ತು ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷ ಎನ್.ಎಂ. ಸುರೇಶ್ ಮಾತನಾಡಿ, ಅಂತಿಮವಾಗಿ, ಇದು ಸಾರ್ವಜನಿಕರ ನಿರ್ಧಾರ ಎಂದು ಹೇಳಿದರು.
ಕನ್ನಡ ಭಾಷೆಯ ವಿರುದ್ಧ ಮಾತನಾಡುವ ಮೂಲಕ, ಕಮಲ್ ಹಾಸನ್ ಅವರು ಸ್ವತಃ ಅವಮಾನ ಮಾಡಿಕೊಂಡಿದ್ದಾರೆ ಎಂದು ಸುರೇಶ್ ಹೇಳಿದರು.
"ವಾಸ್ತವವಾಗಿ, ಕನ್ನಡಿಗರು ಯಾವಾಗಲೂ ತಮಿಳು ಸೇರಿದಂತೆ ಇತರ ಭಾಷೆಗಳ ಚಿತ್ರಗಳನ್ನು ಸ್ವಾಗತಿಸಿದ್ದಾರೆ. 'ಥಗ್ ಲೈಫ್' ಅನ್ನು ಫ್ಲಾಪ್ ಚಿತ್ರವೆಂದು ಘೋಷಿಸಲಾಗಿದೆ. ಆದರೆ ನನ್ನನ್ನು ನಂಬಿ, ಆ ಚಿತ್ರ ಬೇರೆಕಡೆಗಿಂತ ಬೆಂಗಳೂರಿನಲ್ಲಿ ಉತ್ತಮ ವ್ಯಾಪಾರ ಮಾಡುತ್ತಿತ್ತು. ನೀವು ಅದರ ಬಗ್ಗೆ ಯೋಚಿಸಿದರೆ, ನಿರ್ಮಾಪಕರಿಗೆ ಇದು ತುಂಬಾ ನಷ್ಟವಾಗಿದೆ. ಅವರು ಕ್ಷಮೆ ಕೇಳಲು ನಿರಾಕರಿಸಿದ್ದರಿಂದ ಇದೆಲ್ಲವೂ ಆಗಿದೆ" ಎಂದು ಸುರೇಶ್ ತಿಳಿಸಿದರು.
ಕಮಲ್ ಹಾಸನ್ ಅವರು ಕನಿಷ್ಠ ಸೌಜನ್ಯಕ್ಕಾದರೂ ಕ್ಷಮೆಯಾಚಿಸಬೇಕು ಎಂದು ಸುರೇಶ್ ಪುನರುಚ್ಚರಿಸಿದರು.
Advertisement