
ಬೆಂಗಳೂರು: ರಾಜ್ಯ ಸರ್ಕಾರ “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಘೋಷ ವಾಕ್ಯದೊಂದಿಗೆ ಜೂನ್ 21 ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಚರಿಸಲು ನಿರ್ಧರಿಸಿದೆ.
ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಚಿವರು ಹಾಗೂ ಇತರ ಹಲವು ಗಣ್ಯರು ಭಾಗಿಯಾಗುತ್ತಾರೆ.
ಯೋಗ ದಿನಾಚರಣೆಯಲ್ಲಿ ಸುಮಾರು ಐದು ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಈ ವರ್ಷ ಐದು ಲಕ್ಷ ಜನರಿಗೆ ಯೋಗ ಹೇಳಿಕೊಡಲಾಗುತ್ತದೆ. ರಾಜ್ಯದಲ್ಲಿ 10 ಸಾವಿರ ಯೋಗ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಮೈಸೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದರು.
ಆರೋಗ್ಯದ ದೃಷ್ಟಿಯಿಂದ ಯೋಗ ಅತ್ಯವಶ್ಯಕವಾಗಿದೆ. ದೇಹ ಹಾಗೂ ಮನಸ್ಸಿಗೆ ಯೋಗ ಒಳ್ಳೆಯದು. ಯೋಗ ನಮ್ಮ ಪ್ರಾಚೀನ ಪದ್ಧತಿಯಾಗಿದೆ. ಯೋಗ ಬೇರೆ ದೇಶದಲ್ಲೂ ಹೆಸರುವಾಸಿಯಾಗಿದೆ. ಯೋಗಕ್ಕೆ ವಿಶ್ವದ ಎಲ್ಲ ದೇಶಗಳಲ್ಲೂ ಪ್ರಾಮುಖ್ಯತೆ ಸಿಕ್ಕಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ಶಾಲೆಗಳಲ್ಲಿ ಯೋಗ ತರಗತಿ ತೆರೆಯುವ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರದ ಬಗ್ಗೆ ಈಗಾಗಲೇ ಚರ್ಚೆಯಾಗಿದೆ. ಶಾಲೆಗಳಲ್ಲಿ ಯೋಗ ಶಿಕ್ಷಕರು, ಯೋಗ ತರಗತಿ ಬೇಕು. ಯೋಗ ಖಂಡಿತವಾಗಲೂ ಅನುಕೂಲವಾಗಲಿದೆ. ಆದರೆ, ಶಾಲೆಗಳಲ್ಲಿ ಯೋಗಕ್ಕಿಂತ ಕ್ರಿಡೆಗಳೇ ಮುಖ್ಯ. ಆಟವಾಡುವ ವಯಸ್ಸಿನಲ್ಲಿ ಮಕ್ಕಳು ಕ್ರೀಡೆಗೆ ಆದ್ಯತೆ ನೀಡಬೇಕು. ಬೇರೆ ಬೇರೆ ಕ್ರೀಡೆಗಳಿಗೆ ಅವಕಾಶ ನೀಡಬೇಕು. ಮಕ್ಕಳು ವಯಸ್ಸಿಗೆ ಬಂದ ನಂತರ ಯೋಗ ಹೇಳಿಕೊಟ್ಟರೇ ಅದರ ಪ್ರತಿಫಲ ಹೆಚ್ಚಾಗಿರುತ್ತದೆ. ಯೋಗ ಶಿಕ್ಷಕರ ಬದಲಿಗೆ ಸ್ಪೋರ್ಟ್ಸ್ ಶಿಕ್ಷಕರ ಆದ್ಯತೆ ಹೆಚ್ಚಾಗಿರುತ್ತದೆ ಎಂದರು.
Advertisement