
ಮೈಸೂರು: ಮೈಸೂರಿನ ಖಾಸಗಿ ವಸತಿ ಶಾಲೆಯೊಂದಕ್ಕೆ ಬಂದ ಬಾಂಬ್ ಬೆದರಿಕೆಯ ಇಮೇಲ್ ಸಂದೇಶದಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕೆಲಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ.
ಮೈಸೂರು ತಾಲ್ಲೂಕಿನ ಭೂಗತಗಳ್ಳಿಯಲ್ಲಿರುವ ಜ್ಞಾನ ಸರೋವರ ಇಂಟರ್ ನ್ಯಾಷನಲ್ ವಸತಿ ಶಾಲೆಗೆ ಇಂದು ಬಾಂಬ್ ಬೆದರಿಕೆ ಕರೆ ಬಂದಿದ್ದು, 2023ರಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಬಾಂಬ್ ಇಟ್ಟು ಶಾಲೆ ಸ್ಫೋಟಿಸುತ್ತೇವೆ ಎಂದು ಬೆದರಿಕೆ ಇಮೇಲ್ ಬಂದಿದ್ದು, ಸ್ಥಳಕ್ಕೆ ಬಾಂಬ್ ಪತ್ತೆ ದಳ, ಶ್ವಾನದಳ ಸಿಬ್ಬಂದಿ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ.
ಇಮೇಲ್ ಬೆದರಿಕೆ ಸಂದೇಶವನ್ನು ಲಘುವಾಗಿ ಪರಿಗಣಿಸಬಾರದು. ಹೈದರಾಬಾದ್ ಅತ್ಯಾಚಾರದ ಆರೋಪಿಗೆ ನ್ಯಾಯ ಕೊಡಿಸಬೇಕು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ವಿದ್ಯಾರ್ಥಿಗಳು ಸಾವನ್ನಪ್ಪುತ್ತಾರೆ. ಮಕ್ಕಳನ್ನು ಹತ್ಯೆ ಮಾಡುವುದು ನಮ್ಮ ಉದ್ದೇಶವಲ್ಲಾ. ಆದರೆ ನ್ಯಾಯ ಪಡೆಯಲು ಮಕ್ಕಳು ತಮ್ಮ ಜೀವನವನ್ನು ತ್ಯಾಗ ಮಾಡಬೇಕಾಗುತ್ತದೆ ಎಂದು ಇ-ಮೇಲ್ ಸಂದೇಶದಲ್ಲಿ ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಮೇಲ್ ನಲ್ಲಿ 2023ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದ್ದು, ಅಚ್ಚರಿಕೆ ಕಾರಣವಾಗಿದೆ. ಹೈದರಾಬಾದ್ ಅತ್ಯಾಚಾರ ಕೇಸಿಗೂ ಈ ಶಾಲೆಗೂ ಏನು ಸಂಬಂಧ ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದು, ಈ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
2023 ರಲ್ಲಿ ಹೈದರಾಬಾದ್‌ನ ಲೆಮನ್ ಟ್ರೀ ಹೋಟೆಲ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ದಿವಿಜ್ ಎಂಬ ವ್ಯಕ್ತಿಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಇಮೇಲ್ ನಲ್ಲಿ ಒತ್ತಾಯಿಸಲಾಗಿದೆ. ದಿವಿಜ್ ಮದ್ಯ ವ್ಯಸನಿ" ಮತ್ತು "ಯುವತಿಯರ ವ್ಯಸನಿ" ಎಂದು ಆರೋಪಿಸಿದ್ದು, ಆತನ ಮತ್ತು ಆತನ ಪೋಷಕರದು ಎನ್ನಲಾದ ಫೋನ್ ನಂಬರ್ ಗಳನ್ನು ಉಲ್ಲೇಖಿಸಲಾಗಿದೆ.
ಪೊಲೀಸರು ಈ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ಮಾಡಲು ವಿಫಲರಾಗಿದ್ದಾರೆ ಎಂದು ಸಂದೇಶದಲ್ಲಿ ಹೇಳಲಾಗಿದ್ದು, “ಬಾಂಬ್ ಸ್ಫೋಟದ ನಂತರವೇ ತನಿಖೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ. ಈ ಸಂಬಂಧ ಶಾಲಾ ಆಡಳಿತವು ಮೈಸೂರು ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದು, ತನಿಖೆ ಮುಂದುವರೆದಿದೆ.
Advertisement