ಮಾವು ಬೆಳೆಗಾರರ ಆಕ್ರೋಶಕ್ಕೆ ಹೆದರಿದ ಸರ್ಕಾರ: ನಂದಿ ಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ವಿಧಾನಸೌಧಕ್ಕೆ ಸ್ಥಳಾಂತರ!

ಸಚಿವ ಸಂಪುಟ ಸಭೆ ವೇಳೆಯಲ್ಲಿ ಜೆಡಿಎಸ್ ನೇತೃತ್ವದಲ್ಲಿ ನಂದಿ ಹಿಲ್ಸ್‌ನಲ್ಲಿ ಪ್ರತಿಭಟನೆ ನಡೆಸಲು ರೈತರು ಯೋಜಿಸಿದ್ದರಿಂದ ಮಾವು ಬೆಳೆಗಾರರ ​​ಕೋಪಕ್ಕೆ ಸರ್ಕಾರ ಹೆದರಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು/ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ನಂದಿ ಬೆಟ್ಟದಲ್ಲಿ ಜೂನ್ 19 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯನ್ನು ಇದೀಗ ದಿಢೀರನೇ ಅಚ್ಚರಿಯ ರೀತಿಯಲ್ಲಿ ಬೆಂಗಳೂರಿನ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗಿದೆ.

ಸಚಿವ ಸಂಪುಟ ಸಭೆ ವೇಳೆಯಲ್ಲಿ ಜೆಡಿಎಸ್ ನೇತೃತ್ವದಲ್ಲಿ ನಂದಿ ಹಿಲ್ಸ್‌ನಲ್ಲಿ ಪ್ರತಿಭಟನೆ ನಡೆಸಲು ರೈತರು ಯೋಜಿಸಿದ್ದರಿಂದ ಮಾವು ಬೆಳೆಗಾರರ ​​ಕೋಪಕ್ಕೆ ಸರ್ಕಾರ ಹೆದರಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಇದರಿಂದ ಆಗುವ ಮುಜುಗರಿಂದ ತಪ್ಪಿಸಿಕೊಳ್ಳಲು ಸರ್ಕಾರ ಸಚಿವ ಸಂಪುಟ ಸಭೆಯನ್ನು ಸ್ಥಳಾಂತರಿಸಿದೆ ಎಂದು ಮೂಲಗಳು ಹೇಳಿವೆ.

"ಅಭಿವೃದ್ಧಿ ವಿಚಾರದಲ್ಲಿ ಘೋಷಣೆ ಸೇರಿದಂತೆ ಕೆಲವು ನಿರ್ಧಾರಗಳು ಇನ್ನೂ ಕಾರ್ಯಗತಗೊಳ್ಳದ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಸಭೆಯನ್ನು ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಶೀಘ್ರದಲ್ಲೇ ನಂದಿ ಹಿಲ್ಸ್‌ನಲ್ಲಿ ಸಚಿವ ಸಂಪುಟ ಸಭೆಗೆ ಮರು ದಿನಾಂಕ ನಿಗದಿಪಡಿಸಲಾಗುವುದು ಎಂದು ಅಧಿಕೃತ ಮೂಲಗಳು ಹೇಳಿವೆ.

ಮಾವಿಗೆ ಬೆಂಬಲ ಬೆಲೆಗೆ ಆಗ್ರಹ: ಮಾವಿಗೆ ಕನಿಷ್ಠ 10 ರಿಂದ 15 ಸಾವಿರ ರೂ.ವರೆಗೆ ಬೆಂಬಲ ಬೆಲೆ ನೀಡಬೇಕೆಂಬ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮಾವು ಬೆಳೆಗಾರರ ಆಗ್ರಹ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ. ಆಂಧ್ರಪ್ರದೇಶದಲ್ಲಿ ಕರ್ನಾಟಕದ ಮಾವಿನ ಹಣ್ಣನ್ನು ನಿಷೇಧಿಸಿದ ಕಾರಣ 'ತೋತಾಪುರಿ' ತಳಿಯಲ್ಲಿ ಹೆಚ್ಚಿನ ನೀರಿನ ಅಂಶವಿರುವುದರಿಂದ ಬೆಲೆ ಕುಸಿದಿದೆ. ಸಿಎಂ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದು ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಪ್ರತಿಭಟನೆಗೆ ಜೆಡಿಎಸ್ ರೈತರ ಸಿದ್ಧತೆ:

ಮಾವು ರೈತರ ಬೇಡಿಕೆಗಳನ್ನು ಸರ್ಕಾರ ಕಡೆಗಣಿಸಿರುವುದನ್ನು ವಿರೋಧಿಸಿ ಜೂನ್ 17 ರಂದು ಮುಳಬಾಗಿಲು ಜೆಡಿಎಸ್ ಶಾಸಕರಾದ ಸಮೃದ್ಧಿ ಮಂಜುನಾಥ್ ಮತ್ತು ಶ್ರೀನಿವಾಸಪುರ ಕ್ಷೇತ್ರದ ವೆಂಕಟಶಿವಾರೆಡ್ಡಿ ಅವರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ದರು. ನಂದಿ ಹಿಲ್ಸ್‌ನಲ್ಲಿ ನಡೆಯುವ ಸಂಪುಟ ಸಭೆ ವೇಳೆಯಲ್ಲಿ ರೈತರು ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರೊಂದಿಗೆ ಪ್ರತಿಭಟನೆ ಮಾಡಲು ಯೋಜಿಸಿದ್ದರು.

ಎತ್ತಿನಹೊಳೆ ಯೋಜನೆಯ ಅನುಷ್ಠಾನದಲ್ಲಿ ವಿಳಂಬ ಸೇರಿದಂತೆ ಕೆಲವು ಸಮಸ್ಯೆಗಳನ್ನು ಪ್ರಸ್ತಾಪಿಸಲು ಅವರು ತಯಾರಿ ಮಾಡಿಕೊಂಡಿದ್ದರು ಎನ್ನಲಾಗಿದೆ. ನಂದಿ ಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಗೆ ಜಿಲ್ಲಾಡಳಿತ ಕೂಡಾ ಸಕಲ ಸಿದ್ಧತೆ ಮಾಡಿಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com