ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ನಂದಿ ಬೆಟ್ಟದಲ್ಲಿ ಜೂನ್ 19ರಂದು ಮಧ್ಯಾಹ್ನ 12 ಗಂಟೆಗೆ ನಡೆಯಬೇಕಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯನ್ನು ಬೆಂಗಳೂರಿನ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗಿದೆ. ಮಾವು ರೈತರ ಬೇಡಿಕೆಗಳನ್ನು ಸರ್ಕಾರ ಕಡೆಗಣಿಸಿರುವುದನ್ನು ವಿರೋಧಿಸಿ ಸಚಿವ ಸಂಪುಟ ಸಭೆ ವೇಳೆ ಜೆಡಿಎಸ್ ನೇತೃತ್ವದಲ್ಲಿ ನಂದಿ ಹಿಲ್ಸ್‌ನಲ್ಲಿ ಪ್ರತಿಭಟನೆ ನಡೆಸಲು ರೈತರು ಯೋಜಿಸಿದ್ದರು. ಇದರಿಂದ ಆಗುವ ಮುಜುಗರಿಂದ ತಪ್ಪಿಸಿಕೊಳ್ಳಲು ಸರ್ಕಾರ ಸಚಿವ ಸಂಪುಟ ಸಭೆಯನ್ನು ಸ್ಥಳಾಂತರಿಸಿದೆ ಎಂದು ಮೂಲಗಳು ಹೇಳಿವೆ. ಅಭಿವೃದ್ಧಿ ವಿಚಾರದಲ್ಲಿ ಘೋಷಣೆ ಸೇರಿದಂತೆ ಕೆಲವು ನಿರ್ಧಾರಗಳು ಇನ್ನೂ ಕಾರ್ಯಗತಗೊಳ್ಳದ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಸಭೆಯನ್ನು ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಶೀಘ್ರದಲ್ಲೇ ನಂದಿ ಹಿಲ್ಸ್ ನಲ್ಲಿ ಸಚಿವ ಸಂಪುಟ ಸಭೆಗೆ ಮರು ದಿನಾಂಕ ನಿಗದಿಪಡಿಸಲಾಗುವುದು ಎಂದು ಅಧಿಕೃತ ಮೂಲಗಳು ಹೇಳಿವೆ.
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆಗಳನ್ನು ತೆರೆಯಲು ಅಮುಲ್ ಸಂಸ್ಥೆಗೆ BMRCL ಅನುಮತಿ ನೀಡಿರುವುದು ಇದೀಗ ರಾಜ್ಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಕರ್ನಾಟಕದ ಹೈನುಗಾರಿಕೆಗೆ ಜೀವನಾಡಿ ಆಗಿರುವ ನಂದಿನ ಉತ್ಪನ್ನಗಳನ್ನು ರಾಜ್ಯ ಸರ್ಕಾರವೇ ಕಡೆಗಣಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿಎಂಆರ್ ಸಿಎಲ್ ಟೆಂಡರ್ ಕರೆದಿತ್ತು. ಅಮೂಲ್ ಹೊರತಾಗಿ ಬೇರೆ ಯಾರೂ ಮಳಿಗೆಗಳಿಗೆ ಅರ್ಜಿ ಹಾಕಿಲ್ಲ. ಈಗ KMF ಗೆ ಅರ್ಜಿ ಹಾಕುವಂತೆ ಸೂಚಿಸಿದ್ದೇನೆ. ಟೆಂಡರ್ ಕರೆಯಲಾಗಿದ್ದ 10 ಕಡೆಗಳ ಪೈಕಿ ಎರಡು ಕಡೆ ಅಮೂಲ್ ಮಳಿಗೆ ತೆರೆದಿದೆ. ತೆರೆಯಲಾಗಿರುವ ಮಳಿಗೆ ಮುಚ್ಚಿಸುವುದು ಸರಿಯಲ್ಲ. ಆದರೆ ಉಳಿದ 8 ಸ್ಥಳಗಳಲ್ಲಿ ಕೆಎಂಎಫ್ ಮಳಿಗೆಗೆ ಅವಕಾಶ ನೀಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಪ್ಯಾರಿಸ್ ಪ್ರವಾಸ ಮುಗಿಸಿ ಅಮೆರಿಕಕ್ಕೆ ತೆರಳಲು ಪ್ರಿಯಾಂಗ್ ಖರ್ಗೆಗೆ ಅನುಮತಿ ನಿರಾಕರಿಸಲಾಗಿದ್ದು ಇದರಿಂದ ಸಚಿವರು ತೀವ್ರ ನಿರಾಸೆಗೊಂಡಿದ್ದು ಕ್ಲಿಯರೆನ್ಸ್ ನೀಡದ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸದ್ಯ ಪ್ಯಾರಿಸ್ ನಲ್ಲಿ ಇರುವ ಪ್ರಿಯಾಂಕ್ ಖರ್ಗೆ, ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಬಳಿಕ ಅಮೆರಿಕದಲ್ಲಿ ನಡೆಯುತ್ತಿರುವ ಬಯೋ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಐಟಿ ಬಿಟಿಗೆ ಸಂಬಂಧಪಟ್ಟಂತೆ ಬೋಸ್ಟನ್, ಸ್ಯಾನ್‌ಫ್ರಾನ್ಸಿಸ್ಕೋ ನಗರಗಳಲ್ಲಿ ಆಯೋಜನೆಗೊಂಡಿದ್ದ ಕಾನ್ಫರೆನ್ಸ್‌ನಲ್ಲಿ ಅವರು ಭಾಗವಹಿಸಬೇಕಿತ್ತು. ಆದರೆ ಸಚಿವರ ಜೊತೆ ತೆರಳಿದ್ದ ಐಎಎಸ್ ಅಧಿಕಾರಿಗಳಿಗೆ ಅಮೆರಿಕಕ್ಕೆ ತೆರಳಲು ಅನುಮತಿ ಸಿಕ್ಕಿದ್ದು ಪ್ರಿಯಾಂಕ್ ಖರ್ಗೆಗೆ ಅನುಮತಿ ನಿರಾಕರಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಕರ್ನಾಟಕದಲ್ಲಿ ನಟ ಕಮಲ್ ಹಾಸನ್ ನಟನೆಯ ಥಗ್ ಲೈಫ್ ಚಿತ್ರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸುಪ್ರೀಂ ಕೋರ್ಟ್ ನ ಈ ಆದೇಶವನ್ನು ವಿರೋಧಿಸುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ತಮಿಳು ಭಾಷೆಯಿಂದ ಕನ್ನಡ ಭಾಷೆ ಹುಟ್ಟಿದೆ ಎಂಬ ತಮ್ಮ ಹೇಳಿಕೆಗೆ ಕಮಲ್ ಹಾಸನ್ ಕ್ಷಮೆಯಾಚಿಸಬೇಕಿತ್ತು. ಆದರೆ ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದು ಅದನ್ನು ನಾವು ಸ್ವೀಕರಿಸುತ್ತೇವೆ ಎಂದರು. ಇನ್ನು ಸುಪ್ರೀಂಕೋರ್ಟ್ ಆದೇಶವಿದ್ದರೂ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಆಗುತ್ತಿಲ್ಲ. ಯಾಕೆಂದರೆ ಕರ್ನಾಟಕ ವಿತರಣಾ ಹಕ್ಕನ್ನು ಖರೀದಿಸಿರುವ ವೆಂಕಟೇಶ್ ಕಮಲಾಕರ್ ಚಿತ್ರವನ್ನು ಬಿಡುಗಡೆ ಮಾಡಲ್ಲ ಎಂದು ಹೇಳಿದ್ದಾರೆ. ಜೂನ್ 5ರಂದೆ ಚಿತ್ರ ದೇಶಾದ್ಯಂತ ಬಿಡುಗಡೆಯಾಗಿತ್ತು. ಆದರೆ ನಿರಸ ಪ್ರದರ್ಶನ ಕಂಡಿದೆ. ತಮಿಳುನಾಡಿನಲ್ಲೇ ಚಿತ್ರ ಗಳಿಕೆ ಮಾಡಿಲ್ಲ. ಈಗಿರುವಾಗ ಇಲ್ಲಿ ಕನ್ನಡಿಗರ ವಿರೋಧದ ನಡುವೆಯೂ ಚಿತ್ರವನ್ನು ಬಿಡುಗಡೆ ಮಾಡಿದರೂ ಚಿತ್ರ ಗಳಿಕೆ ಮಾಡುವುದು ಕಷ್ಟ ಎಂದು ವೆಂಕಟೇಶ್ ಹೇಳಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಯುವ ಪುರಸ್ಕಾರ ಪ್ರಶಸ್ತಿ ಮತ್ತು ಬಾಲ ಪುರಸ್ಕಾರ ಪ್ರಶಸ್ತಿ ಪ್ರಕಟವಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಮಾಡುವ 2025ನೇ ಸಾಲಿನ ಯುವ ಪುರಸ್ಕಾರ ಮೈಸೂರಿನ ಆರ್.ದಿಲೀಪ್ ಕುಮಾರ್ ಅವರ ಪಚ್ಚೆಯ ಜಗುಲಿಗೆ ಲಭಿಸಿದೆ. ಇನ್ನು ಬಾಲ ಪುರಸ್ಕಾರ ಪ್ರಶಸ್ತಿ ಕೆ.ಶಿವಲಿಂಗಪ್ಪ ಹಂದಿಹಾಳು ಅವರ ನೋಟ್ ಬುಕ್ ಸಣ್ಣ ಕಥೆಗಳ ಸಂಕಲನಕ್ಕೆ ಲಭಿಸಿದೆ. ನೋಟ್ ಬುಕ್ ಮಕ್ಕಳ ಸಣ್ಣ ಕಥೆಗಳ ಪುಸ್ತಕವು 2021ರಲ್ಲಿ ಪ್ರಕಟವಾಗಿತ್ತು. ಪ್ರಶಸ್ತಿ ಪುರಸ್ಕೃತರು ತಲಾ 50 ಸಾವಿರ ನಗದು ಹಾಗೂ ಫಲಕಗಳನ್ನು ಪಡೆಯಲಿದ್ದಾರೆ.
Advertisement