
ಮೈಸೂರು: ದಸರಾ ಇತಿಹಾಸದಲ್ಲೇ ಬಹುತೇಕ ಇದೇ ಮೊದಲ ಬಾರಿಗೆ 11 ದಿನದ ದಸರಾ ಬಂದಿದೆ. ಪ್ರತಿ ವರ್ಷ 10 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ 11 ದಿನಗಳ ಕಾಲ ನಡೆಯಲಿದೆ.
ಪ್ರತಿ ವರ್ಷ 9 ದಿನ ನವರಾತ್ರಿ 10ನೇ ದಿನ ವಿಜಯದಶಮಿ ಆಚರಣೆ ಮಾಡುವುದು ವಾಡಿಕೆ. ಆದರೆ ಮಧ್ಯೆದಲ್ಲಿ ಪಂಚಮಿ ತಿಥಿ ಎರಡು ದಿನ ಬಂದಿದ್ದರಿಂದ ಈ ಬಾರಿ 11ನೇ ದಿನಕ್ಕೆ ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ತಿಥಿಗಳ ಪ್ರಕಾರ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ಅಂದ್ರೆ 11 ದಿನ ದಸರಾ ಉತ್ಸವ ನಡೆಯಲಿದೆ. ಸೆ.24 ರಂದು ಬರುವ ಪಂಚಮಿ ತಿಥಿ 25ಕ್ಕೂ ಮುಂದುವರಿಯುವ ಕಾರಣ ದಸರಾ 11 ದಿನ ಆಗಲಿದೆ.
ದಸರಾ ಪರಂಪರೆ ಶುರುವಾಗಿ 410 ವರ್ಷ ಕಳೆದಿದೆ. 410 ವರ್ಷಗಳಿಂದಲೂ 10 ದಿನ ದಸರಾ ನಡೆದಿದೆ. ಆದರೆ ಈ ಬಾರಿ 11 ದಿನ ದಸರಾ ನಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿ ಆಗಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ದಿನಗಳ ಬಗ್ಗೆ ಧಾರ್ಮಿಕವಾಗಿ ಚರ್ಚೆಗಳು ಶುರುವಾಗಿವೆ. 1410 ರಿಂದ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ದಸರಾ ಆಚರಣೆ ನಡೆದಿದ್ದು 11 ದಿನ ದಸರಾ ನಡೆದ ಉದಾಹರಣೆಗಳಿಲ್ಲ. ಮಹಾಲಯ ಅಮಾವಾಸ್ಯೆಯ ಮರು ದಿನದಿಂದ ನವರಾತ್ರಿ ಶುರುವಾಗಿ 9 ದಿನಗಳ ಮರುದಿನ ವಿಜಯದಶಮಿ ಆಚರಿಸುವುದು ಸಂಪ್ರದಾಯ. ವಿಜಯದಶಮಿಯಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.
ಈ ಸಂಬಂಧ ಧಾರ್ಮಿಕ ಚಿಂತಕ ಡಾ. ಶೆಲ್ವಪಿಳೈ ಅಯ್ಯಂಗಾರ್ ಖಾಸಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ನೂರು ವರ್ಷಗಳ ಹಿಂದೆ ದಸರಾ 11 ದಿನ ನಡೆದಿರಬಹುದು. ಆದ್ರೆ ನನ್ನ ಅನುಭವದಲ್ಲಿ ಇದೇ ಮೊದಲು 11 ದಿನ ನಡೆಯುತ್ತಿದೆ. ಪಂಚಾಂಗದಲ್ಲಿ ಸೆ.21ರಂದು ಮಹಾಲಯ ಅಮಾವಾಸ್ಯೆ ಬರುತ್ತೆ. ಅದರ ಮಾರನೇ ದಿನದಿಂದ ಅಂದ್ರೆ ಸೆ.22ರಿಂದ ಅ.2ರ ವರೆಗೆ ಶರನ್ನವರಾತ್ರಿ ಮತ್ತು ವಿಜಯದಶಮಿ ನಡೆಯುತ್ತದೆ ಎಂದು ವಿವರಿಸಿದ್ದಾರೆ.
ಏಕೆಂದ್ರೆ ಪಂಚಾಂಗದಲ್ಲಿ ಪ್ರಥಮೆ, ದ್ವಿತೀಯ, ತೃತೀಯ, ಚತುರ್ಥಿ ಸರಿಯಿದೆ. ಆದ್ರೆ ಪಂಚಮಿ ಸೆ.26, 27ರಂದು ಎರಡೂ ದಿನ ಬಂದಿದೆ. ಆ 2 ದಿನ ಗಣನೆಗೆ ತೆಗೆದುಕೊಂಡ್ರೆ 10ನೇ ದಿನ ಮಹಾನವಮಿ (ನವಮಿ) ಬರುತ್ತದೆ. 11ನೇ ದಿನ ದಶಮಿ ಬರುತ್ತದೆ. ಇದು ಸಾಮಾನ್ಯ ದಿನಗಳಲ್ಲಿ ಬಂದಿರುವುದು ಉಂಟು, ಆದ್ರೆ ನೂರಾರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಈ ತಿಥಿ ಬಂದಿರುವುದು ವಿಶೇಷ ಎನ್ನುತ್ತಾರೆ ಶೆಲ್ವಪಿಳೈ ಅಯ್ಯಂಗಾರ್.
Advertisement