News Headlines 20-06-25 | ಮಾಹಿತಿ ಬಿಚ್ಚಿಟ್ರೆ 'ಕೈ' ಸರ್ಕಾರ ಪತನ: ಪಾಟೀಲ್; ಮುಸ್ಲಿಂ ಮೀಸಲಾತಿ ಹೆಚ್ಚಳಕ್ಕೆ HDK ಕಾರಣ; ಚಕ್ರವರ್ತಿ ಸೂಲಿಬೆಲೆಗೆ ಪೊಲೀಸ್ ನೋಟಿಸ್; ನಂದಕಿಶೋರ್ ವಿರುದ್ಧ ವಂಚನೆ ಆರೋಪ!

News Headlines 20-06-25  | ಮಾಹಿತಿ ಬಿಚ್ಚಿಟ್ರೆ 'ಕೈ' ಸರ್ಕಾರ ಪತನ: ಪಾಟೀಲ್; ಮುಸ್ಲಿಂ ಮೀಸಲಾತಿ ಹೆಚ್ಚಳಕ್ಕೆ HDK ಕಾರಣ; ಚಕ್ರವರ್ತಿ ಸೂಲಿಬೆಲೆಗೆ ಪೊಲೀಸ್ ನೋಟಿಸ್; ನಂದಕಿಶೋರ್ ವಿರುದ್ಧ ವಂಚನೆ ಆರೋಪ!

1. ಮಾಹಿತಿ ಬಿಚ್ಚಿಟ್ರೆ 'ಕೈ' ಸರ್ಕಾರ ಪತನ: ಪಾಟೀಲ್

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ವಸತಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಆಡಿಯೋ ಕ್ಲಿಪ್ ವೈರಲ್ ಆಗಿದ್ದು ಸರ್ಕಾರಕ್ಕೆ ಇರಿಸುಮುರಿಸು ತರಿಸಿದೆ. ತಮ್ಮಲ್ಲಿರುವ ಮಾಹಿತಿಯನ್ನು ಬಹಿರಂಗಪಡಿಸಿದರೆ, ಕಾಂಗ್ರೆಸ್ ನೇತೃತ್ವದ ಸರ್ಕಾರದ ಅಡಿಪಾಯವೇ ಅಲುಗಾಡುತ್ತದೆ ಎಂದು ಹೇಳಿದ್ದಾರೆ. ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆ ಮಾತನಾಡಿರುವ ಆಡಿಯೋ ಕ್ಲಿಪ್ ಇದಾಗಿದೆ. ಪಾಟೀಲ್ ತಮ್ಮ ಆಳಂದ್ ಕ್ಷೇತ್ರದೊಳಗಿನ ವಿವಿಧ ಗ್ರಾಮಗಳಲ್ಲಿ ಒಟ್ಟು 950 ಮನೆಗಳನ್ನು ಫಲಾನುಭವಿಗಳಿಂದ ಹಣ ಪಡೆದು ಹಂಚಿಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಕಾರ್ಯದರ್ಶಿಯನ್ನು ಪ್ರಶ್ನಿಸಿದ್ದರು. ಇನ್ನು ಆಡಿಯೋ ವೈರಲ್ ಆದ ಬೆನ್ನಲ್ಲೆ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಈ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ.

2. ಮುಸ್ಲಿಮರಿಗೆ ಶೇ.15 ಮೀಸಲಾತಿ ಹೆಚ್ಚಳ: HDK ಸಿಎಂ ಆಗಿದ್ದಾಗ ಶಿಫಾರಸ್ಸು

ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ. 15 ಮೀಸಲಾತಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಜಮೀರ್ ಅಹ್ಮದ್ ಖಾನ್, ವಸತಿ ಇಲಾಖೆ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿ ನೀಡುವ ನಿರ್ಧಾರ ಈಗ ಕೈಗೊಂಡ ತೀರ್ಮಾನವಲ್ಲ. 2019ರಲ್ಲಿ ಮೈತ್ರಿ ಸರ್ಕಾರದಲ್ಲಿ ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೀಸಲಾತಿ ಬಗ್ಗೆ ಸಂಪುಟ ಉಪಸಮಿತಿ ಶಿಫಾರಸು ಮಾಡಿತ್ತು ಎಂದು ಹೇಳಿದ್ದಾರೆ. ಸಾಚಾರ್ ಸಮಿತಿಯ ವರದಿ ಪ್ರಕಾರ ಕೇಂದ್ರದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 15ರಷ್ಟು ಮೀಸಲಾತಿ ನೀಡಬೇಕೆಂದು ಇದೆ. ಅದೇ ರೀತಿ ರಾಜ್ಯದಲ್ಲೂ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಇತ್ತು. ಹೀಗಾಗಿ ಕೇಂದ್ರದ ಮಾದರಿಯನ್ನೇ ರಾಜ್ಯದಲ್ಲೂ ಅನುಸರಿಸಲಾಗಿದೆ ಎಂದರು.

3. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಿ: ಅಮಿತ್ ಶಾ

'ಭ್ರಷ್ಟ' ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವಂತೆ ಕೇಂದ್ರ ಗೃಹ ಸಚಿವ ಮತ್ತು ಪಕ್ಷದ ಹಿರಿಯ ನಾಯಕ ಅಮಿತ್ ಶಾ ಅವರು ರಾಜ್ಯ ಬಿಜೆಪಿ ಘಟಕಕ್ಕೆ ಸಲಹೆ ಮತ್ತು ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಇಂದು ಬೆಳಗ್ಗೆ ಅಮಿತ್ ಶಾ ಜಿ ಅವರನ್ನು ಭೇಟಿ ಮಾಡಿದ್ದು ಕರ್ನಾಟಕದ ರಾಜಕೀಯ ಸನ್ನಿವೇಶ ಮತ್ತು ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದರು. ಬೆಂಗಳೂರಿಗೆ ನಿನ್ನೆ ಆಗಮಿಸಿದ್ದ ನೀಡಿದ್ದ ಅಮಿತ್ ಶಾ ಅವರು, ಆದಿಚುಂಚನಗಿರಿ ವಿಶ್ವವಿದ್ಯಾಲಯ ಬೆಂಗಳೂರು ಕ್ಯಾಂಪಸ್, ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳನ್ನು ಶುಕ್ರವಾರ ಉದ್ಘಾಟಿಸಿದರು.

4. ಚಕ್ರವರ್ತಿ ಸೂಲಿಬೆಲೆಗೆ ಪೊಲೀಸ್ ನೋಟಿಸ್

ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಬಾರದು ಎಂದು ತಾಕೀತು ಮಾಡಿ ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ಕುಂದಾಪುರ ಪೊಲೀಸರು ನೋಟಿಸ್ ನೀಡಿದ್ದಾರೆ. ಕುಂದಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆಯವರಿಂದ 'ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ' ಎಂಬ ವಿಚಾರವಾಗಿ ಜೂ.20, 21 ಮತ್ತು 22ರಂದು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಪೊಲೀಸ್ ಅಧಿಕಾರಿಗಳು, ರಾಜಕೀಯ ಮಾತನಾಡಬಾರದು ಹಾಗೂ ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದು ಆಯೋಜಕರಿಗೆ ಹಾಗೂ ಸುಲಿಬೆಲೆಗೆ ನೋಟಿಸ್ ನೀಡಲಾಗಿದೆ. ತಮಗೆ ನೊಟೀಸ್ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಕ್ರವರ್ತಿ ಸೂಲಿಬೆಲೆ, ಕರ್ನಾಟಕದಲ್ಲಿ ರಾಜಕೀಯ ಮಾತಾಡಬಾರದು ಎಂಬುದು ಯಾವಾಗಿನಿಂದ ಜಾರಿಯಾಗಿದೆ ಎಂದು ಪ್ರಶ್ನಿಸಿದ್ದಾರೆ.

5. ನಂದಕಿಶೋರ್ ವಿರುದ್ಧ ವಂಚನೆ ಆರೋಪ

ಕನ್ನಡದ ನಿರ್ದೇಶಕ ನಂದ ಕಿಶೋರ್ ವಿರುದ್ಧ 22 ಲಕ್ಷ ರೂ ವಂಚನೆ ಮಾಡಿದ ಆರೋಪ ಕೇಳಿಬಂದಿದೆ, ಈ ಸಂಬಂಧ ನಟ ಶಬರೀಶ್ ಕರ್ನಾಟಕ ಫಿಲಂ ಚೇಂಬರ್ಗೆ ದೂರು ನೀಡುವುದಾಗಿ ಹೇಳಿದ್ದಾರೆ. ರನ್ನ, ಮಾಣಿಕ್ಯ, ಪೊಗರು, ಮುಕುಂದ ಮುರಾರಿ, ಅಧ್ಯಕ್ಷ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಸಿರುವ ನಂದ ಕಿಶೋರ್ 22 ಲಕ್ಷ ರೂಗಳನ್ನು ಪಡೆದುಕೊಂಡಿದ್ದು ಈಗ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಹಣ ವಾಪಸ್ ಕೊಡುವಂತೆ ಕೇಳಿದರೆ ನಟ ಸುದೀಪ್ ಹೆಸರು ಬಳಸಿ ನನಗೆ ಬೆದರಿಕೆ ಸಹ ಹಾಕಿದ್ದಾರೆ ಎಂದು ಆರೋಪಿಸಿದರು.

6. ಹುಲಿ ದಾಳಿಗೆ ಮಹಿಳೆ ಬಲಿ

ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ರೇಂಜ್ ಬಳಿ ಹುಲಿ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಕಳೆದ ಒಂಬತ್ತು ದಿನಗಳಲ್ಲಿ ಇದು ಎರಡನೇ ಘಟನೆಯಾಗಿದೆ. ಮೃತ ಮಹಿಳೆಯನ್ನು ದೇಶಿಪುರ ಕಾಲೋನಿಯ ಪುಟ್ಟಮ್ಮ ಎಂದು ಗುರುತಿಸಲಾಗಿದೆ. ದನ ಮೇಯಿಸುತ್ತಿದ್ದಾಗ ದಾಳಿ ಮಾಡಿದ್ದ ಹುಲಿ ನಂತರ ಸ್ಥಳದಿಂದ 100 ಮೀಟರ್ ದೂರ ಎಳೆದೊಯ್ದಿತ್ತು. ಹುಲಿ ದಾಳಿಯಿಂದ ಮಹಿಳೆ ಮೃತಪಟ್ಟಿದ್ದು ಹುಲಿಯನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸಲಾಗುವುದು ಎಂದು ಬಂಡಿಪುರ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com