
ಬೆಂಗಳೂರು: "ಲಂಚ ನೀಡಿದವರಿಗೆ ಮಾತ್ರ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ನಿಜ' ಎಂಬ ಕಾಂಗ್ರೆಸ್‌ನ ಹಿರಿಯ ಶಾಸಕ ಬಿ ಆರ್ ಪಾಟೀಲ್ ಅವರ ಹೇಳಿಕೆಯನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಖಂಡಿಸಿದ್ದಾರೆ. ಅಂತಹ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.
ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಪಾಟೀಲ್ ಅವರು ಸಚಿವ ಜಮೀರ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರೊಂದಿಗೆ ದೂರವಾಣಿಯೊಂದಿಗೆ ನಡೆಸಿರುವ ಸಂಭಾಷಣೆಯ ಆಡಿಯೋ ಕ್ಲಿಪ್‌ನಲ್ಲಿ ತಮ್ಮ ಕ್ಷೇತ್ರದೊಳಗಿನ ಹಳ್ಳಿಗಳಲ್ಲಿ ಮನೆ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಲಂಚದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಕಾರ್ಯದರ್ಶಿಯನ್ನು ಪ್ರಶ್ನಿಸಿದ್ದಾರೆ. ಮನೆ ಹಂಚಿಕೆಯಲ್ಲಿ ಲಂಚದ ಆರೋಪ ಮಾಡಿ ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಆಡಿಯೋ ಕ್ಲಿಪ್ ವೈರಲ್ ಆಗಿದ್ದು, ಯಾವುದೇ ಕಾರಣಕ್ಕೂ ಅದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಬಿ.ಆರ್. ಪಾಟೀಲ್ ಏನು ಹೇಳಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಈ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆ. ಅವರು ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ" ಎಂದರು.
ಪಾರದರ್ಶಕವಾಗಿ ಮನೆ ಮಂಜೂರಾತಿ ಆಗುತ್ತಿರುವಾಗ ಫಲಾನುಭವಿಗಳು ಹೇಗೆ ಹಣ ಪಾವತಿಸುತ್ತಾರೆ. ಯಾರು ತೀರ್ಮಾನ ಮಾಡುತ್ತಾರೆ? ಪಂಚಾಯಿತಿ, ಸ್ಥಳೀಯ ಸಂಸ್ಥೆಗಳೇ ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್, ಈ ಹಣದ ವಿಚಾರ ಸರ್ಕಾರದಲ್ಲಿರುವ ಸಚಿವರಿಗೆ ಹೇಗೆ ಬರುತ್ತದೆ? ಯಾವ ಉದ್ದೇಶದಿಂದ ಅವರು ಹೀಗೆ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ? ಇದು ಸರಿಯಲ್ಲ. ನಾನು ಖಂಡಿಸುತ್ತೇನೆ ಎಂದು ಹೇಳಿದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಾಟೀಲ್, ಆಡಿಯೋದಲ್ಲಿರುವುದು ನನ್ನ ಧ್ವನಿ. ಸತ್ಯವನ್ನೇ ಮಾತನಾಡಿದ್ದೇನೆ. ನಾನೇ ಮಾತನಾಡಿದ್ದೇನೆ. ನಾನು ಏನು ಮಾಡಬೇಕೋ ಅದನ್ನು ಹೇಳಿದ್ದೇನೆ, ಮುಖ್ಯಮಂತ್ರಿ ಏನು ಮಾಡುತ್ತಾರೋ ನನಗೆ ಗೊತ್ತಿಲ್ಲ. ಅವರು ನನಗೆ ಕರೆ ಮಾಡಿದರೆ ಅವರ ಬಳಿಗೆ ಹೋಗಿ ಮಾತನಾಡುತ್ತೇನೆ" ಎಂದು ಅವರು ಹೇಳಿದರು. ನೆಗೆಟಿವ್ ಏನು? ನಾನು ಸತ್ಯವನ್ನೇ ಮಾತನಾಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮುಂದುವರಿದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಎಲ್ಲಾ ಸರ್ಕಾರಗಳ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಆದರೆ ನಾವು (ಕಾಂಗ್ರೆಸ್) ಜನಪರ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದು, ಅಂತಹವುಗಳು ನಡೆಯಬಾರದು ಎಂದರು.
ಹಣ ಕೊಟ್ಟ ಮೇಲೆ ಮನೆ ಮಂಜೂರಾತಿ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಎಲ್ಲ ಸಂದರ್ಭದಲ್ಲೂ ಅಲ್ಲ, ಐದಾರು ಪಂಚಾಯಿತಿಗಳಲ್ಲಿ ಹಣ ನೀಡಿ ಹಂಚಿಕೆ ಮಾಡಲಾಗಿದೆ, ನನ್ನ ಕ್ಷೇತ್ರದಲ್ಲಿ ಮನೆ ಮಂಜೂರು ಮಾಡುವಂತೆ ನಾಲ್ಕು ಬಾರಿ ಪತ್ರ ನೀಡಿದ್ದೆ, ಏನೂ ಆಗಿಲ್ಲ, ಪಂಚಾಯಿತಿ ಅಧ್ಯಕ್ಷರು ಅದನ್ನು ಮಾಡಿದ್ದಾರೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ನಮ್ಮ ನಾಯಕ ಎಂದ ಪಾಟೀಲ್, ಸಿಎಂ ಕರೆದರೆ ಅವರ ಬಳಿ ಹೋಗಿ ಮಾತನಾಡುತ್ತೇನೆ. ಏನಾಯಿತು ಎಂದು ಅವರಿಗೆ ಹೇಳುತ್ತೇನೆ ಎಂದರು. ಎಐಸಿಸಿ ಸ್ಪಷ್ಟನೆ ಕೇಳಿದ್ದರೆ ಏನು ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‘ಇಲ್ಲ ನಾನು ಎಐಸಿಸಿ ಮಟ್ಟಕ್ಕೆ ಬೆಳೆದಿಲ್ಲ. ಹಣಕ್ಕಾಗಿ ಮನೆ ಹಂಚಿಕೆ ನನ್ನ ಕ್ಷೇತ್ರದಲ್ಲಿ ಮಾತ್ರ ನಡೆದಿಲ್ಲ. ಅನೇಕ ಕಡೆಗಳಲ್ಲಿ ನಡೆದಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇಂತಹ ಘಟನೆಗಳು ನಡೆದಿರಬಹುದು ಮತ್ತು ಅದರ ಬಗ್ಗೆ ತಮಗೆ ತಿಳಿದಿಲ್ಲ ಎಂಬ ವಸತಿ ಸಚಿವರ ಸ್ಪಷ್ಪನೆ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲ್, ಅವರು (ಸಚಿವರು) ಅದರ ಬಗ್ಗೆ ತನಿಖೆ ಮಾಡಲಿ ಎಂದು ಹೇಳಿದರು.
ಬಿ.ಆರ್. ಪಾಟೀಲ್ ಅವರ ಹೇಳಿಕೆ ಪ್ರತಿಪಕ್ಷ ಬಿಜೆಪಿಗೆ ದೊಡ್ಡ ಅಸ್ತ್ರ ಒದಗಿಸಿದ್ದು, ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಮುಗಿ ಬಿದಿದ್ದಾರೆ.
Advertisement