ಶಾಲೆಗಳ ಕಳ್ಳಾಟ ತಡೆಯಲು ಕ್ರಮ: ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ ಮುಖಚರ್ಯೆ ಆಧಾರಿತ ಇ–ಹಾಜರಾತಿ ಕಡ್ಡಾಯ!

ಸುಮಾರು 5 ಕೋಟಿ ರು. ವೆಚ್ಚದ ಈ ಯೋಜನೆಯನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ (ಕೆಎಸ್‌ಡಿಸಿ) ಮೂಲಕ ನಿರ್ವಹಣೆ ಮಾಡಲಾಗುತ್ತದೆ.
Madhu bangarappa
ಮಧು ಬಂಗಾರಪ್ಪ
Updated on

ಬೆಂಗಳೂರು: ಪ್ರಸಕ್ತ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಸರು ಕೂಗಿ ಹಾಜರಾತಿ ಪಡೆಯುವ ಬದಲಾಗಿ, ಶಿಕ್ಷಕರು ಮೊಬೈಲ್‌ನಲ್ಲಿ ವಿದ್ಯಾರ್ಥಿಗಳ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಹಾಜರಾತಿ ದಾಖಲಿಸಿಕೊಳ್ಳಲಿದ್ದಾರೆ.

‘ನಿರಂತರ’ ಯೋಜನೆಯಡಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಸೇರಿ 52,686 ಶಾಲೆಗಳ 52 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿಯನ್ನು ಕೃತಕ ಬುದ್ಧಿಮತ್ತೆ ಚಾಲಿತ, ಮುಖ ಚಹರೆ ಗುರುತು ಆಧಾರಿತವಾಗಿ (ಎಐ ಫೇಶಿಯಲ್ ರಿಕಗ್ನಿಷನ್) ತೆಗೆದುಕೊಳ್ಳಲಾಗುತ್ತದೆ.

ಸುಮಾರು 5 ಕೋಟಿ ರು. ವೆಚ್ಚದ ಈ ಯೋಜನೆಯನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ (ಕೆಎಸ್‌ಡಿಸಿ) ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಇದಕ್ಕಾಗಿ ಸಾಫ್ಟ್‌ವೇರ್‌ ಕೂಡ ಸಿದ್ಧಪಡಿಸಲಾಗುತ್ತಿದೆ. ಇದು ಗರಿಷ್ಠ ಗೌಪ್ಯತೆ ಮತ್ತು ಸುರಕ್ಷತೆ ಕಾಪಾಡುತ್ತದೆ. ಪ್ರಸಕ್ತ ವರ್ಷದಿಂದಲೇ ಇ-ಹಾಜರಾತಿ ಜಾರಿಗೆ ಬರಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ, ನಕಲಿ ದಾಖಲಾತಿ ತೋರಿಸಿ ಸರ್ಕಾರದ ವಿವಿಧ ಸೌಲಭ್ಯ ಪಡೆಯುತ್ತಿರುವ ಶಾಲೆಗಳ ಕಳ್ಳಾಟಕ್ಕೆ ತಡೆ ಹಾಕಲು ಮುಂದಾಗಿರುವ ಶಿಕ್ಷಣ ಇಲಾಖೆ, ‘ಇ–ಹಾಜರಾತಿ’ ಕಡ್ಡಾಯದತ್ತ ಹೆಜ್ಜೆ ಇಟ್ಟಿದೆ. ಇದೇ ಶೈಕ್ಷಣಿಕ ಸಾಲಿನಿಂದಲೇ ಸರ್ಕಾರಿ ಹಾಗೂ ಸರ್ಕಾರದ ಅನುದಾನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ‘ಇ–ಹಾಜರಾತಿ’ ಕಡ್ಡಾಯಗೊಳಿಸುವ ಆದೇಶವನ್ನೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

Madhu bangarappa
ಆರೋಗ್ಯ ಇಲಾಖೆಯಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೆ ಸರ್ಕಾರ ಮುಂದು: ಜುಲೈ 1ರಿಂದ ಮೊಬೈಲ್ ಹಾಜರಾತಿ ಕಡ್ಡಾಯ!

ಮಕ್ಕಳ ಮುಖಚರ್ಯೆ ಗುರುತಿಸುವ ಮೂಲಕ ಇ–ಹಾಜರಾತಿ ದಾಖಲಿಸುವ ‘ನಿರಂತರ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದಾಗಿ ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕ್‌ಚಂದ್ರ ಅವರನ್ನು ಯೋಜನೆಯ ಅನುಷ್ಠಾನಾಧಿಕಾರಿಯಾಗಿ ನೇಮಿಸಿದೆ.

ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯವಾದ ಕೃತಕ ಬುದ್ಧಿಮತ್ತೆ ಆಧಾರಿತ ಮೊಬೈಲ್‌ ಹಾಗೂ ಇತರೆ ಪರಿಕರಗಳನ್ನು ರಾಜ್ಯದ 52,686 ಶಾಲೆಗಳಲ್ಲಿ ಅಳವಡಿಸಲು ₹5 ಕೋಟಿ ಅನುದಾನ ನೀಡಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ನಿಯಮಗಳ ಪ್ರಕಾರ ಟೆಂಡರ್‌ ಆಹ್ವಾನಿಸುವ ಅಧಿಕಾರವನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ನೀಡಲಾಗಿದೆ.

ಹಲವು ಅಕ್ರಮಗಳಿಗೆ ತಡೆ: ಸರ್ಕಾರಿ ಶಾಲೆ ಮಕ್ಕಳಿಗೆ ಸರ್ಕಾರ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ, ಮಧ್ಯಾಹ್ನದ ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆ ಅಡಿ ಹಾಲು ವಿತರಣೆ, ವಾರಕ್ಕೆ ಆರು ದಿನಗಳು ಮೊಟ್ಟೆ, ಬಾಳೆ ಹಣ್ಣು ನೀಡುತ್ತಿದೆ. ಅದಕ್ಕಾಗಿ ಪ್ರತಿ ವರ್ಷ 4 ಸಾವಿರ ಕೋಟಿಗೂ ಅಧಿಕ ಮೊತ್ತ ವೆಚ್ಚ ಮಾಡಲಾಗುತ್ತಿದೆ. ಕೆಲ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇದ್ದರೂ, ಹೆಚ್ಚು ತೋರಿಸಿಕೊಂಡು ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಎದುರಾಗಿದ್ದವು.

ಪ್ರತಿ ಶಾಲೆಯಲ್ಲೂ ವೆಕ್ಟರ್‌–ಆಧಾರಿತ ಸುಧಾರಿತ ತಂತ್ರಜ್ಞಾನದ ಮುಖಚರ್ಯೆ ಗುರುತಿಸುವ ಯಂತ್ರ ಅಳವಡಿಸಲಾಗುತ್ತದೆ. ಅದರಲ್ಲಿ ಸೆರೆ ಹಿಡಿದ ವಿದ್ಯಾರ್ಥಿಗಳ ದತ್ತಾಂಶವನ್ನು ಮೊಬೈಲ್‌ ಆ್ಯಪ್‌ ಮೂಲಕ ವಿಶಿಷ್ಟ ಗುರುತಿಸುವ ಸಾಧನಕ್ಕೆ ರವಾನಿಸಲಾಗುತ್ತದೆ. ಎಸ್‌ಎಟಿಎಸ್‌ ತಂತ್ರಾಂಶಕ್ಕೂ (ವಿದ್ಯಾರ್ಥಿ ಸಾಮರ್ಥ್ಯ ಪತ್ತೆ ವ್ಯವಸ್ಥೆ) ಸಂಪರ್ಕ ಕಲ್ಪಿಸಲಾಗಿದೆ. ಈ ಎಲ್ಲ ಪ್ರಕ್ರಿಯೆಯ ಕೇಂದ್ರ ಘಟಕವನ್ನು ವಿಕಾಸ ಸೌಧದಲ್ಲಿ ಸ್ಥಾಪಿಸಲಾಗುತ್ತದೆ. ರಾಜ್ಯವಲಯದಿಂದ ನಿರ್ವಹಿಸಲ್ಪಡುತ್ತದೆ. ಇದು ವಿದ್ಯಾರ್ಥಿಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

Madhu bangarappa
2,500 ಕೋಟಿ ರೂ ವೆಚ್ಚದಲ್ಲಿ 500 ಸರ್ಕಾರಿ ಶಾಲೆ ಮೇಲ್ದರ್ಜೆಗೇರಿಸಲು ಸಂಪುಟ ಅಸ್ತು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com