ಐಶ್ವರ್ಯ ಗೌಡ ವಂಚನೆ ಪ್ರಕರಣ: "ಯಾವುದೇ ಹಣಕಾಸಿನ ವಹಿವಾಟು ನಡೆದಿಲ್ಲ; ED ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ"; ಡಿ.ಕೆ ಸುರೇಶ್
ಬೆಂಗಳೂರು: ಹಲವಾರು ಜನರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿರುವ ಮಹಿಳೆಯ ವಿರುದ್ಧದ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಂಸದ ಡಿ ಕೆ ಸುರೇಶ್ ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಸುರೇಶ್, ಇಡಿಯವರು ವಿಚಾರಣೆಗೆ ಹಾಜರಾಗಿ ಎಂದು ತಿಳಿಸಿದ್ದಾರೆ. ನಾನು ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಯಾವ ಮಾನದಂಡವಿಟ್ಟುಕೊಂಡು ನನ್ನನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಚಾರಣೆಗೆ ಹೋದಾಗ ಇದರ ಬಗ್ಗೆ ತಿಳಿಯುತ್ತದೆ. ಅವರ ಪ್ರಶ್ನೆಗಳು ಯಾವ ಹಾದಿಯಲ್ಲಿವೆ, ವಿಚಾರಣೆಗೂ ಪ್ರಕರಣಕ್ಕೂ ಸಂಬಂಧ ಇದೆಯೋ ಇಲ್ಲವೋ ಎಂದು ತಿಳಿಯುತ್ತದೆ. ಜೊತೆಯಲ್ಲಿ ವಕೀಲರು ಇರುತ್ತಾರೆ. ನಂತರ ಯಾವುದಕ್ಕೆ ಸಂಬಂಧವಿದೆ, ಅಸಂಬದ್ಧವಾಗಿದೆ ಎನ್ನುವುದರ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳು ಇಡಿ ಎಲ್ಲೆ ಮೀರಿ ನಡೆಯುತ್ತಿದೆ ಎಂದು ಅನೇಕ ಬಾರಿ ಹೇಳಿವೆ. ಆದಾಗ್ಯೂ ಎಚ್ಚೆತ್ತುಕೊಂಡಿಲ್ಲ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ ಎಂದರ್ಥ. ಅವರ ವ್ಯಾಪ್ತಿಯನ್ನು ಮೀರಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುವುದು ನೋಡಿದರೆ ಸರ್ಕಾರವೊಂದರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎನಿಸುತ್ತಿದೆ. ಏನು ಮಾಡುತ್ತಾರೆ ಎಂದು ನೋಡೋಣ" ಎಂದು ಮಾರ್ಮಿಕವಾಗಿ ನುಡಿದರು.
ಐಶ್ವರ್ಯ ಗೌಡ ನಿಮ್ಮ ಹೆಸರು ಹೇಳಿಕೊಂಡು ವಂಚನೆ ಮಾಡಿದ್ದಾರೆ. ನಿಮ್ಮ ಅವರ ನಡುವೆ ಹಣಕಾಸಿನ ವ್ಯವಹಾರ ನಡೆದಿದೆಯೇ ಎಂದಾಗ, "ಆ ಮಹಿಳೆ ಹಾಗೂ ನಮ್ಮ ನಡುವೆ ಯಾವುದೇ ಹಣಕಾಸು ಹಾಗೂ ಇತರೇ ವಹಿವಾಟು ನಡೆದಿಲ್ಲ. ಅವರು ಮೂರ್ನಾಲ್ಕು ಬಾರಿ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಕೆಲವೊಂದು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ವಾಸ ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಅವರ ಆಯೋಜನೆಯ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಇದರ ಹೊರತಾಗಿ ಬೇರೇನೂ ಇಲ್ಲ. ಇದರ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುತ್ತೇನೆ" ಎಂದು ಸ್ಪಷ್ಟವಾಗಿ ನುಡಿದರು.
ನಟರೊಬ್ಬರು ನಿಮ್ಮ ದನಿ ಅನುಕರಣೆ ಮಾಡಿ ವಂಚನೆ ಎಸಗಿರುವ ಬಗ್ಗೆ ಕೇಳಿದಾಗ, "ಈ ಬಗ್ಗೆ ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಈ ತನಿಖೆಯ ಬೆಳವಣಿಗೆ ಏನಾಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿಯಿಲ್ಲ" ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ