
ಕೊಪ್ಪಳ ಜಿಲ್ಲೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಶಕ್ತಿ ಬಳಸಿಕೊಂಡು ಮಹಿಳೆಯರು ರಾಜ್ಯದ ಎಲ್ಲ ಭಾಗದಲ್ಲಿಯೂ ಓಡಾಡುತ್ತಿದ್ದಾರೆ. ಗಂಡುಮಕ್ಕಳಿಗೆ ಬಸ್‌ನಲ್ಲಿ ಹತ್ತಲು ಸಾಧ್ಯವಾಗುತ್ತಿಲ್ಲ. ಪುರುಷರ ಪರಿಸ್ಥಿತಿ ಕೆಟ್ಟದಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆದ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಭಾನುವಾರ ನಡೆದ ಕೆ.ಎಚ್. ಪಾಟೀಲ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ಕೋಟಿ ಖರ್ಚಾಗುತ್ತಿದೆ. ನಾನು ಎಂಟು ಜನ ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಅವರವರ ಆಡಳಿತದಲ್ಲಿ ಎಲ್ಲರೂ ಒಳ್ಳೆಯ ಕೆಲಸಗಳನ್ನೇ ಮಾಡಿದ್ದಾರೆ’ ಎಂದರು.
ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದರಿಂದ ಕಾರ್ಮಿಕರು, ಬಡವರು ಸೇರಿ ಎಲ್ಲ ವರ್ಗದವರಿಗೂ ಅನುಕೂಲ ದೊರೆತಿದೆ. ಅದರಲ್ಲೂ ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರು ದೇವಸ್ಥಾನಗಳಿಗೆ ಪ್ರವಾಸ ಬೆಳೆಸುತ್ತಿದ್ದಾರೆ. ಇದರಿಂದ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದೆ.
ಬಸ್‌ಗಳಲ್ಲಿ ಹತ್ತುವ ವೇಳೆ ಮಹಿಳೆಯರಿಂದ ಪುರುಷರು ಏಟು ತಿಂದಿರುವ ಪರಿಸ್ಥಿತಿಗಳೂ ಇವೆ ಎಂದರು. ಆಡಳಿತದಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕಿದೆ. ನಿರ್ಧಾರಗಳು ಬೇಗನೆ ಮಾಡಬೇಕು. ಎಷ್ಟು ಬೇಗ ನಿರ್ಧಾರಗಳು ಆಗುತ್ತವೆಯೊ ಅಷ್ಟು ಬೇಗ ಜನರ ಕಷ್ಟಗಳು ಪರಿಹಾರವಾಗುತ್ತವೆ’ ಎಂದು ಹೇಳಿದರು.
Advertisement