ನೆಲಮಂಗಲ ಬಳಿ ಗಲಾಟೆ-ಹಲ್ಲೆ ಆರೋಪ: ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿ ಮೂವರ ವಿರುದ್ಧ FIR ದಾಖಲು; Video

ಸೈಫ್ ಖಾನ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ, ಕುಟುಂಬದವರ ಹೇಳಿಕೆಯನ್ನು ದಾಖಲಿಸಲಾಗಿದೆ.
Anath Kumar Hegde
ಅನಂತ್ ಕುಮಾರ್ ಹೆಗಡೆ (ಸಂಗ್ರಹ ಚಿತ್ರ)(File photo)
Updated on

ಬೆಂಗಳೂರು: ಬೆಂಗಳೂರಿನ ಹೊರವಲಯದ ಹಳೆ ನಿಜಗಲ್ ಬಳಿ ನಡೆದ ರಸ್ತೆ ಗಲಭೆ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರ ಮಾಜಿ ಸಚಿವ ಹಾಗೂ ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಅವರ ಗನ್‌ಮ್ಯಾನ್ ಮತ್ತು ಚಾಲಕನ ವಿರುದ್ಧ ದಾಬಸ್‌ಪೇಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಹಳೆ ನಿಜಗಲ್ ಬಳಿ ಹೆಗಡೆ ಅವರು ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಬರುತ್ತಿದ್ದಾಗ, ಎಸ್‌ಯುವಿ ಕಾರನ್ನು ಅಕ್ರಮವಾಗಿ ಓವರ್ ಟೇಕ್ ಮಾಡಿ ನಿಲ್ಲಿಸಿ ಚಾಲಕನ ವಿರುದ್ಧ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಾಗಿದೆ.

ಇನ್ನೊಂದು ಕಾರನ್ನು ಸೈಫ್ ಖಾನ್ ಎಂಬುವವರು ಚಲಾಯಿಸುತ್ತಿದ್ದು ಅನಂತ್ ಕುಮಾರ್ ಹೆಗಡೆ ಅವರ ಕಾರು ಮುಂದಕ್ಕೆ ಹೋಗಲು ದಾರಿ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಓವರ್ ಟೇಕ್ ಮಾಡಿ ನಿಲ್ಲಿಸಿ ವಾಗ್ವಾದಕ್ಕಿಳಿದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಹೆಗಡೆ ಅವರ ಕಾರು ಚಾಲಕ, ಸೈಫ್ ಖಾನ್ ಅವರ ಕಾರಿಗೆ ಎರಡು ಮೂರು ಬಾರಿ ಹಾರ್ನ್ ಮಾಡಿದ್ದರೂ ಸೈಫ್ ಖಾನ್ ಅದನ್ನು ಗಮನಿಸದೆ ಚಾಲನೆಯನ್ನು ಮುಂದುವರೆಸಿದರು. ಇದಕ್ಕೆ ಕೋಪದಿಂದ ಹೆಗಡ ಅವರ ಕಾರು ಚಾಲಕ ಎಸ್‌ಯುವಿಯನ್ನು ಅಡ್ಡಗಟ್ಟಿದ್ದಾರೆ. ನಂತರ ಚಾಲಕ ಮತ್ತು ಗನ್‌ಮ್ಯಾನ್ ಇಬ್ಬರೂ ಹೊರಬಂದು ಸೈಫ್ ಖಾನ್ ಮತ್ತು ಅವರ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.

ಸೈಫ್ ಖಾನ್ ಅವರ ಕುಟುಂಬದ ಸದಸ್ಯರು ಕಾರಿನ ಒಳಗಿನಿಂದ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಕಿತ್ತಳೆ ಬಣ್ಣದ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ಸೈಫ್ ಖಾನ್ ಮತ್ತು ಅವರ ಸಹೋದರನನ್ನು ಎದುರಿಸುತ್ತಿರುವ ಮತ್ತು ಹಲ್ಲೆ ಮಾಡುತ್ತಿರುವುದನ್ನು ತೋರಿಸುತ್ತದೆ.

ದಾಳಿಕೋರರ ಜೊತೆಗಿದ್ದ ಕೆಲವರು ಕಾರಿನಲ್ಲಿದ್ದ ವ್ಯಕ್ತಿ ಮುಸ್ಲಿಂ ಎಂದು ಹೇಳುತ್ತಾ ಹಲ್ಲೆಗೆ ಪ್ರಚೋದಿಸಿದರು ಎಂದು ಸೈಫ್ ಖಾನ್ ವರದಿಗಾರರಿಗೆ ತಿಳಿಸಿದರು. ಪೊಲೀಸರು ಇದನ್ನು ದೃಢಪಡಿಸಲಿಲ್ಲ, ತನಿಖೆ ಇನ್ನೂ ಮುಂದುವರೆದಿದೆ ಎಂದು ಹೇಳಿದರು.

ಹಲ್ಲೆ ವೇಳೆ ಸೈಫ್ ಖಾನ್ ಹಲ್ಲು ಮುರಿದುಹೋಗಿದೆ ಎಂದು ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸೈಫ್ ಖಾನ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ, ಕುಟುಂಬದವರ ಹೇಳಿಕೆಯನ್ನು ದಾಖಲಿಸಲಾಗಿದೆ.

ನೆಲಮಂಗಲದಲ್ಲಿರುವ ಪೊಲೀಸ್ ಉಪ ಅಧೀಕ್ಷಕರ ಕಚೇರಿಯಲ್ಲಿ ಪೊಲೀಸರು ಅನಂತ್ ಕುಮಾರ್ ಹೆಗಡೆ ಮತ್ತು ಅವರ ಇಬ್ಬರು ಸಹಚರರನ್ನು ವಿಚಾರಣೆ ನಡೆಸಿದ್ದಾರೆ. ಗನ್ ಮ್ಯಾನ್ ಮತ್ತು ಚಾಲಕನನ್ನು ಬಂಧಿಸಲಾಗಿದೆ. ಮಾಜಿ ಸಂಸದರು ಭಾಗಿಯಾಗಿರುವ ಸುದ್ದಿ ಹರಡುತ್ತಿದ್ದಂತೆ, ಪೊಲೀಸ್ ಠಾಣೆಯಲ್ಲಿ ದೊಡ್ಡ ಜನಸಮೂಹ ಜಮಾಯಿಸಿತು.

ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 117 (ಸ್ವಯಂಪ್ರೇರಿತವಾಗಿ ತೀವ್ರ ನೋವುಂಟುಮಾಡುವುದು), 126 (ಅಕ್ರಮ ಸಂಯಮ), 74 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 351(4) (ಕ್ರಿಮಿನಲ್ ಬೆದರಿಕೆ), ಮತ್ತು 352 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿಕೆ ಬಾಬಾ ಸುದ್ದಿಗಾರರಿಗೆ ತಿಳಿಸಿದ ಪ್ರಕಾರ, ದೂರಿನಲ್ಲಿ ಅನಂತ್ ಕುಮಾರ್ ಹೆಗಡೆ, ಅವರ ಚಾಲಕ, ಗನ್ ಮ್ಯಾನ್ ಮತ್ತು ಇತರ ನಾಲ್ವರನ್ನು ಹೆಸರಿಸಲಾಗಿದೆ. ಮೂವರನ್ನು ಬಂಧಿಸಲಾಗಿದ್ದು, ತನಿಖೆಯ ನಂತರ ಆರೋಪಿಗಳ ಹೆಸರುಗಳನ್ನು ಬಹಿರಂಗಪಡಿಸಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com