
ಬೆಂಗಳೂರು: ಹೈಟೆಕ್ ಡಿಫೆನ್ಸ್ ಅಂಡ್ ಏರೋಸ್ಪೆಸ್ ಪಾರ್ಕ್ ನಿರ್ಮಾಣಕ್ಕಾಗಿ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ ಮೂರು ಗ್ರಾಮಗಳ 495 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಮಂಗಳವಾರ ತಿಳಿಸಿದ್ದಾರೆ.
ಭೂ ಸ್ವಾಧೀನ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸ್ಪಷ್ಪನೆ ನೀಡಿದ ಸಚಿವರು, ಮುಂದೆ ಕೈಗಾರಿಕೆ ಉದ್ದೇಶಕ್ಕಾಗಿ ಈ ಹೋಬಳಿಯಿಂದ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಪ್ರತಿಭಟನಾ ನಿರತ ರೈತರು ತಮ್ಮ ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.
ವಿಧಾನಸೌಧದ ಕಚೇರಿಯಲ್ಲಿ ದೇವನಹಳ್ಳಿ ಶಾಸಕ ಕೆ.ಎಚ್.ಮುನಿಯಪ್ಪ ಅವರೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ 1,772.2 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು 2021ರ ಆಗಸ್ಟ್ 27ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, 2022ರ ಫೆ.15ರಂದು ಸರಕಾರ ಆದೇಶ ಹೊರಡಿಸಿದೆ ಎಂದು ಸಚಿವರು ವಿವರಿಸಿದರು.
ಈ ಭಾಗದ ರೈತರು ಕೈಗಾರಿಕಾ ಯೋಜನೆಗಳಿಗಾಗಿ ಈ ಹಿಂದೆ ಎರಡು ಬಾರಿ ಭೂಮಿ ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ. ಇದನ್ನು ಗಣನೆಗೆ ತೆಗೆದುಕೊಂಡು ಚನ್ನರಾಯಪಟ್ಟಣದಲ್ಲಿ 231.23 ಎಕರೆ, ಮತ್ತಿಬಾರ್ಲು ನಲ್ಲಿ 185.18 ಎಕರೆ, ಮತ್ತು ಶ್ರೋತ್ರಿಯ ತೆಳ್ಳೋಹಳ್ಳಿಯ 78.21 ಎಕರೆ ಪ್ರದೇಶವನ್ನು ಭೂಸ್ವಾಧೀನದಿಂದ ಹೊರಗಿಡಲು ಸರ್ಕಾರ ನಿರ್ಧರಿಸಿದೆ ಎಂದು ಪಾಟೀಲ್ ವಿವರಿಸಿದರು.
ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವನ್ನು ಜಿಲ್ಲಾಧಿಕಾರಿ ನಿರ್ಧರಿಸುತ್ತಾರೆ ಮತ್ತು ಭೂಮಿ ಕಳೆದುಕೊಳ್ಳುವವರು ಪ್ರತಿ ಎಕರೆಗೆ 10,771 ಚದರ ಅಡಿ ಅಭಿವೃದ್ಧಿಪಡಿಸಿದ ಭೂಮಿ ಪಡೆಯಬಹುದಾಗಿದೆ. ಅದನ್ನು ಅವರು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಬಹುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಸರ್ಕಾರ ರೈತರ ಬೇಡಿಕೆಗಳನ್ನು ಗೌರವಿಸಿದ್ದು, ಪ್ರತಿಭಟನೆಯನ್ನು ಈಗ ಕೊನೆಗೊಳಿಸಬೇಕು. ನಾವು ಕೈಗಾರಿಕಾ ಬೆಳವಣಿಗೆ ಮತ್ತು ಕೃಷಿ ಕಲ್ಯಾಣದ ನಡುವೆ ಸಮತೋಲನವನ್ನು ಸಾಧಿಸಬೇಕು ಎಂದು ಪಾಟೀಲ್ ಹೇಳಿದರು.
Advertisement