
ನವದೆಹಲಿ: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗಿನ ಸುರಂಗ ಮಾರ್ಗವನ್ನು ಪ್ರಸ್ತಾಪಿಸಿದ್ದರೆ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಗರದ ದಟ್ಟಣೆಯನ್ನು ಕಡಿಮೆ ಮಾಡಲು ಅಲ್ಟ್ರಾ-ಮಾಡರ್ನ್ ಭೂಗತ ರಸ್ತೆ ಜಾಲ (UMURN)ದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ಅತ್ಯಾಧುನಿಕ ಭೂಗತ ರಸ್ತೆ ಜಾಲ ನಿರ್ಮಾಣ ಸೇರಿದಂತೆ ಪೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿ ಹಾಗೂ ರಾಜ್ಯದ ಪ್ರಮುಖ ಸಾರಿಗೆ ಯೋಜನೆಗಳ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ನವದೆಹಲಿಯಲ್ಲಿ ಗಡ್ಕರಿ ನಿವಾಸಕ್ಕೆ ಮಂಗಳವಾರ ತೆರಳಿದ ಸಚಿವ ಕುಮಾರಸ್ವಾಮಿ, ಅತಿ ಮುಖ್ಯವಾಗಿ ಬೆಂಗಳೂರಿಗೆ ಅತ್ಯಗತ್ಯವಾಗಿರುವ ಇವೆರಡೂ ಯೋಜನೆಗಳ ಬಗ್ಗೆ ಹೆದ್ದಾರಿ ಸಚಿವರ ಜತೆ ಸಮಾಲೋಚನೆ ನಡೆಸಿದರು. ನಗರದ ಸಂಚಾರ ದಟ್ಟಣೆ ನಿವಾರಿಸುವ ಸಲುವಾಗಿ ಪೆರಿಫೆರಲ್ ರಿಂಗ್ ರಸ್ತೆ ಹಾಗೂ ಅತ್ಯಾಧುನಿಕ ಭೂಗತ ರಸ್ತೆ ಜಾಲ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು. ಶಿವಕುಮಾರ್ ಪ್ರಸ್ತಾಪಿಸಿದ ಸುರಂಗ ಮಾರ್ಗವನ್ನು ಕುಮಾರಸ್ವಾಮಿ ವಿರೋಧಿಸಿದ್ದರು, ಆದರೆ ಈಗ ಬೆಂಗಳೂರು ನಗರಕ್ಕೆ ಇದೇ ರೀತಿಯ ಯೋಜನೆಗೆ ಧ್ವನಿ ಎತ್ತುತ್ತಿದ್ದಾರೆ.
ನಗರದ ಮಧ್ಯಭಾಗದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ. ಇದನ್ನು ಕಡಿಮೆ ಮಾಡಲು ಇವೆರಡೂ ಯೋಜನೆಗಳ ಶಾಶ್ವತ ಪರಿಹಾರಗಳಾಗಿವೆ. ನಗರದ ಪ್ರಮುಖ ವಲಯಗಳನ್ನು ಸಂಪರ್ಕಿಸುವ ಈ ಯೋಜನೆಗಳು ಅವಶ್ಯಕವಾಗಿವೆ. ಈ ಪರಿವರ್ತನಾತ್ಮಕ ಮೂಲಸೌಕರ್ಯವು ಬೆಂಗಳೂರಿನ ಭವಿಷ್ಯದ ಅಭಿವೃದ್ಧಿಗೆ ಹೆಚ್ಚು ಸಹಕಾರಿ ಆಗಲಿದೆ. ಸುಧಾರಿತ ಮತ್ತು ದೀರ್ಘಕಾಲೀನ ಸುಸ್ಥಿರ ಬೆಳವಣಿಗೆಗೆ ನೆರವಾಗುತ್ತದೆ ಎಂದು ಸಚಿವರು ಹೆದ್ದಾರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಬೆಂಗಳೂರು ದಕ್ಷಿಣದಿಂದ ಉತ್ತರ ಮತ್ತು ಪೂರ್ವದಿಂದ ಪಶ್ಚಿಮ ಭಾಗಗಳನ್ನು ಸಂಪರ್ಕಿಸುವ 42,000 ಕೋಟಿ ರೂ. ವೆಚ್ಚದ ಸುರಂಗ ರಸ್ತೆ ಯೋಜನೆಗೆ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಟೆಂಡರ್ ಕರೆಯಲು ಸಿದ್ಧತೆ ನಡೆಸುತ್ತಿರುವ ಸಮಯದಲ್ಲಿ ಕುಮಾರಸ್ವಾಮಿ ಈ ಪ್ರಸ್ತಾಪ ಮಂಡಿಸಿದ್ದಾರೆ.
ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ ಮತ್ತು ದೇಶಾದ್ಯಂತ ಜನರನ್ನು ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಆಕರ್ಷಿಸುತ್ತಿದೆ ಎಂದು ಎಂಬ ಅಂಶದ ಬಗ್ಗೆ ತಿಳಿಸಿರುವ ಕುಮಾರಸ್ವಾಮಿ, ಇದು ಜನಸಂಖ್ಯಾ ಸಾಂದ್ರತೆ ಮತ್ತು ಸಂಚಾರ ದಟ್ಟಣೆ ಹೆಚ್ಚಳಕ್ಕೆ ಹೇಗೆ ಕಾರಣವಾಗಿದೆ ಎಂಬುದನ್ನು ವಿವರಿಸಿದರು. ಆಧುನಿಕ ಭೂಗತ ರಸ್ತೆ ಜಾಲ ಮತ್ತು ಪೆರಿಫೆರಲ್ ರಿಂಗ್ ರಸ್ತೆಯ ನಿರ್ಮಾಣವು ನಗರಕ್ಕೆ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.
ನಗರದಾದ್ಯಂತ ಪ್ರಮುಖ ವಲಯಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿರುವ ಈ ಯೋಜನೆಗಳು ಸಂಚಾರ ಬಿಕ್ಕಟ್ಟಿಗೆ, ವಿಶೇಷವಾಗಿ ನಗರ ಕೇಂದ್ರದಲ್ಲಿ ಶಾಶ್ವತ ಪರಿಹಾರಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಪರಿವರ್ತನಾತ್ಮಕ ಮೂಲಸೌಕರ್ಯವು ಬೆಂಗಳೂರಿನ ಭವಿಷ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ದೀರ್ಘಕಾಲೀನ ಸುಸ್ಥಿರ ನಗರ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ಅವರು ವಿವರಿಸಿದರು.
Advertisement