
ಬೆಂಗಳೂರು: ರೈತರು ಮತ್ತು ದೇವಾಲಯಗಳ ಆಸ್ತಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ವಕ್ಫ್ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನಾ ರ್ಯಾಲಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ದಾಖಲಾಗಿದ್ದ ಎರಡು ಕ್ರಿಮಿನಲ್ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ಧರ್ಮ ಅಥವಾ ಜನಾಂಗದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) ಸೆಕ್ಷನ್ 196(1)(ಎ) ಅಡಿಯಲ್ಲಿ ಹಾವೇರಿ ಜಿಲ್ಲೆಯ ಸವಣೂರು ಹಾಗೂ ಶಿಗ್ಗಾಂವಿ ಪೊಲೀಸ್ ಠಾಣೆಗಳಲ್ಲಿ ಬೊಮ್ಮಾಯಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು.
ತಮ್ಮ ವಿರುದ್ಧದ ಕೇಸ್ ರದ್ದು ಕೋರಿ ಬೊಮ್ಮಾಯಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರು, ಮಾಜಿ ಸಿಎಂ ವಿರುದ್ಧದ ಎರಡು ಕೇಸ್ ಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬೊಮ್ಮಾಯಿ ಪರವಾಗಿ ವಾದಿಸಿದ ಹಿರಿಯ ವಕೀಲ ಪ್ರಭುಲಿಂಗ್ ಕೆ ನಾವದಗಿ ಅವರು, ದೂರುಗಳು ಸೆಕ್ಷನ್ 196(1)(ಎ) ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲು ಅಗತ್ಯವಾದ ಪ್ರಚೋದನಕಾರಿ ಅಂಶಗಳು ಇಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ವಿಶೇಷ ಸಾರ್ವಜನಿಕ ಅಭಿಯೋಜಕ ಬಿ.ಎನ್. ಜಗದೀಶ, ಪ್ರತಿಭಟನೆಯ ವಿಡಿಯೋ ಸಾಕ್ಷ್ಯವು ಪ್ರಾಥಮಿಕವಾಗಿ ಬೊಮ್ಮಾಯಿ ಅವರು ಅಪರಾಧ ಮಾಡಿದ್ದಾರೆ ಎಂದು ಸೂಚಿಸುತ್ತದೆ ಎಂದು ವಾದಿಸಿದರು.
ಆದಾಗ್ಯೂ, ದೂರನ್ನು ಪರಿಶೀಲಿಸಿದ ನಂತರ ಮತ್ತು ಸಂಬಂಧಿತ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಪೂರ್ವನಿದರ್ಶನಗಳನ್ನು ಉಲ್ಲೇಖಿಸಿದ ನಂತರ, ಆರೋಪಗಳು ತುಂಬಾ ಅಸ್ಪಷ್ಟವಾಗಿವೆ ಮತ್ತು ಯಾವುದೇ ಪ್ರಚೋದನಕಾರಿ ಅಂಶಗಳನ್ನು ಹೊಂದಿಲ್ಲ ಎಂದು ನ್ಯಾಯಾಧೀಶರು ಗಮನಿಸಿದರು.
ವಕ್ಫ್ ಬೋರ್ಡ್ ಆಸ್ತಿ ವಿವಾದ ಕರ್ನಾಟಕದಾದ್ಯಂತ ತೀವ್ರ ಸದ್ದು ಮಾಡಿತ್ತು. ರೈತರು ಮತ್ತು ದೇವಾಲಯಗಳ ಆಸ್ತಿಗಳನ್ನು ಕಬಳಿಸಿದ್ದಕ್ಕಾಗಿ ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ವಿರುದ್ಧ 2024 ರ ನವೆಂಬರ್‌ನಲ್ಲಿ ಬಿಜೆಪಿ ಪ್ರತಿಭಟನೆ ಮಾಡಿತ್ತು. ಈ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಕ್ಫ್ ಮಂಡಳಿ ರೈತರ ಭೂಮಿಯನ್ನು ಕಬಳಿಸುತ್ತಿದೆ. ಸವಣೂರಿನಲ್ಲಿ ನಿಂತು ಎಲ್ಲಿಗೆ ಕಲ್ಲು ಎಸೆದರೂ ಅದು ವಕ್ಫ್ ಭೂಮಿ ಮೇಲೆ ಬೀಳುತ್ತದೆ ಎಂದು ಹೇಳಿದ್ದರು. ಬಳಿಕ ಇದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
Advertisement