ಸಣ್ಣ ಕೈಗಾರಿಕೆಗಳಿಗಾಗಿ ಪ್ರತ್ಯೇಕ ಸಚಿವಾಲಯಕ್ಕೆ ಸಿದ್ಧತೆ; ಪವರ್ ಶೇರಿಂಗ್ ವಿಚಾರ ಚರ್ಚೆ ಇಲ್ಲ: ಡಿ.ಕೆ ಶಿವಕುಮಾರ್

ಕೆಐಎಡಿಬಿ ವತಿಯಿಂದ ಶೇ.20 ರಷ್ಟು ಅನುದಾನ ಸಣ್ಣ ಕೈಗಾರಿಕೆಗಳಿಗೆ ನೀಡಬೇಕು ಎಂಬ ಕಾನೂನಿದೆ. ಈ ವಿಚಾರವಾಗಿ ಎಂ.ಬಿ ಪಾಟೀಲ್ ಅವರ ಬಳಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇನೆ.
DK Shivakumar
ಡಿ.ಕೆ. ಶಿವಕುಮಾರ್
Updated on

ದಾಬಸ್ ಪೇಟೆ : ಸಣ್ಣ ಕೈಗಾರಿಕೆಗಳಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದು, ನಾವು ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ದಾಬಸ್ ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ನಡೆದ ಕಾಸಿಯಾ ಶ್ರೇಷ್ಠತಾ ಮತ್ತು ನಾವೀನ್ಯತಾ ಕೇಂದ್ರ ಮತ್ತು ವಸ್ತು ಪ್ರದರ್ಶನಾ ಕೇಂದ್ರ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಹಾಗೂ ನಂತರ ಮಾಧ್ಯಮಗಳ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ಕೆಐಎಡಿಬಿ ವತಿಯಿಂದ ಶೇ.20 ರಷ್ಟು ಅನುದಾನ ಸಣ್ಣ ಕೈಗಾರಿಕೆಗಳಿಗೆ ನೀಡಬೇಕು ಎಂಬ ಕಾನೂನಿದೆ. ಈ ವಿಚಾರವಾಗಿ ಎಂ.ಬಿ ಪಾಟೀಲ್ ಅವರ ಬಳಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇನೆ. ಸಣ್ಣ ಕೈಗಾರಿಕೆಗಳಿಗೆ ನಾವು ಒತ್ತು ನೀಡಬೇಕು. ಕಾರ್ಮಿಕರ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ. ಅದನ್ನು ಚರ್ಚೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ನೀವೆಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಕಾಸಿಯಾ ಸಂಸ್ಥೆ ಮುಂದಿನ ಪೀಳಿಗೆಗೆ ಕೌಶಲ್ಯಾಭಿವೃದ್ಧಿ ಕೆಲಸವನ್ನು ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡದ ಕೆಲಸವನ್ನು ಕಾಸಿಯಾ ಸಂಸ್ಥೆ ಮಾಡುತ್ತಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

DK Shivakumar
ಪಕ್ಷದಲ್ಲಿ ಆಂತರಿಕ ಕಲಹವಿಲ್ಲ, ರಾಜಣ್ಣ ಹೇಳಿಕೆ ನಿರ್ಲಕ್ಷಿಸಿ: ಸಿಎಂ ಸಿದ್ದರಾಮಯ್ಯ

ನನಗೆ ಸಣ್ಣ ಕೈಗಾರಿಕಾ ವಲಯದ ಪರಿಸ್ಥಿತಿಯ ಬಗ್ಗೆ ಅರಿವಿದೆ. ಈ ವಲಯ ಎಷ್ಟು ಉದ್ಯೋಗ ಸೃಷ್ಟಿಸುತ್ತದೆ, ಎಷ್ಟು ಶ್ರಮಿಸುತ್ತದೆ ಎಂದು ನಾನು ನೋಡಿದ್ದೇನೆ. ನೀವು ಬೃಹತ್ ಕೈಗಾರಿಕೆಗಳಿಗಿಂತ ಹೆಚ್ಚು ಒತ್ತಡವನ್ನು ಸರ್ಕಾರಗಳ ಮೇಲೆ ಹಾಕಬೇಕು. ಆಗ ಮಾತ್ರ ನಿಮಗೆ ಹೆಚ್ಚು ಯಶಸ್ಸು ಸಿಗಲು ಸಾಧ್ಯ. ಕೇಂದ್ರ ಸರ್ಕಾರ ದೊಡ್ಡ ಯೋಜನೆ ಘೋಷಣೆ ಮಾಡುತ್ತದೆ. ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ ನೀಡಬೇಕು ಎಂದು ಹೇಳುತ್ತದೆ. ಆದರೆ ಬ್ಯಾಂಕಿನವರು ನಿಮಗೆ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಹಳೇ ಉದ್ಯಮಿಗಳಿಗೆ ಸಹಕಾರ ನೀಡುವಂತೆ ಹೊಸಬರಿಗೆ ಸಹಕಾರ ನೀಡುವುದಿಲ್ಲ” ಎಂದು ತಿಳಿಸಿದರು.

“ಇತ್ತೀಚೆಗೆ ನೀವು ನಿಮ್ಮ ಕಾರ್ಮಿಕರ ಸಮಸ್ಯೆ ಬಗ್ಗೆ ನನ್ನ ಬಳಿ ಚರ್ಚೆ ಮಾಡಿದ್ದೀರಿ. ನಾನು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಕಾರ್ಮಿಕ ಸಚಿವರಿಗೆ ಅಗತ್ಯ ಸೂಚನೆ ನೀಡಿದ್ದೇವೆ. ನಿಮ್ಮ ನಿಯೋಗ ಸಚಿವರನ್ನು ಭೇಟಿ ಮಾಡಿ ನಿಮ್ಮ ಪರಿಸ್ಥಿತಿಯನ್ನು ವಿವರಿಸಿ. ನೀವು ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಳ್ಳಲು ಹೇಗೆಲ್ಲಾ ಅವಕಾಶವಿದೆ ಎಂದು ನಮ್ಮ ನಾಯಕರುಗಳಿಗೆ ಹೇಳಿ. ನಮ್ಮ ಕೆಲವು ರಾಜಕಾರಣಿಗಳಿಗೆ ಇಂತಹ ವಿಚಾರಗಳು ಅರ್ಥವಾಗುವುದಿಲ್ಲ. ಕೇವಲ ಐಟಿ ಬಿಟಿಯನ್ನು ಮಾತ್ರ ಲೆಕ್ಕಹಾಕುತ್ತಾರೆ” ಎಂದರು.

DK Shivakumar
Watch | ಕಾಂಗ್ರೆಸ್‌ನಲ್ಲಿ ಅನೇಕ 'ಪವರ್ ಸೆಂಟರ್': ಸಚಿವ ರಾಜಣ್ಣ ಹೇಳಿಕೆಯ ಮರ್ಮವೇನು?

“ನಿಮ್ಮೆಲ್ಲರಿಗೂ ಶುಭವಾಗಲಿ. ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಶಕ್ತಿ ತುಂಬಬೇಕಿದೆ. ನಮ್ಮ ನೀತಿಗಳು ಕೈಗಾರಿಕೆಗಳಿಗೆ ಉದಾರವಾಗಿರಬೇಕು, ಆಕರ್ಷಣೀಯವಾಗಿರಬೇಕು. ಬೇರೆ ರಾಜ್ಯಗಳಲ್ಲಿ ಹೆಚ್ಚು ಆಕರ್ಷಕವಾದ ನೀತಿ ರೂಪಿಸುತ್ತಾರೆ. ಆದರೆ ಅಲ್ಲಿ ಗುಣಮಟ್ಟದ ಮಾನವ ಸಂಪನ್ಮೂಲಗಳಿಲ್ಲ. ದೊಡ್ಡ ದೊಡ್ಡ ಸಂಸ್ಥೆಗಳ ಮುಖ್ಯಸ್ಥರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನಾನು ಮೊನ್ನೆ ಗುಬ್ಬಿಗೆ ಹೋಗಿ ಅಲ್ಲಿ ನಿರ್ಮಿಸಲಾಗಿರುವ 10.47 ಕಿ.ಮೀ ಉದ್ದದ ಮೇಲ್ಗಾಲುವೆಯನ್ನು ವೀಕ್ಷಣೆ ಮಾಡಿದೆ. ಸುಮಾರು 40 ಮೀ. ಎತ್ತರದ ಮೇಲ್ಗಾಲುವೆ ಇದಾಗಿದೆ. ವಿಶ್ವಮಟ್ಟದ ಯೋಜನೆ ಮಾಡುವ ಇಂಜಿನಿಯರ್ ಗಳು ನಮ್ಮಲ್ಲಿ ಇದ್ದಾರೆ” ಎಂದರು.

“ನಿಮ್ಮ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರವನ್ನು ಆರಂಭಿಸುತ್ತಿದ್ದು, ನಿಮಗೆ ನಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ. ಈ ಸರ್ಕಾರ ನಿಮ್ಮ ಜೊತೆಗೆ ಇದೆ ಎಂದು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ. ಕಾಸಿಯಾ ಆಡಳಿತ ಮಂಡಳಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗಿ” ಎಂದು ತಿಳಿಸಿದರು.

ಗೃಹಸಚಿವರು ಮಧ್ಯರಾತ್ರಿ ನಿಮ್ಮನ್ನು ಭೇಟಿ ಮಾಡಿದ್ದು, ಪವರ್ ಶೇರಿಂಗ್ ಬಗ್ಗೆ ಚರ್ಚೆ ಮಾಡಲಾಯಿತೇ ಎಂದು ಮಾಧ್ಯಮಗಳು ಕೇಳಿದಾಗ, “ಅವರು ಬಂದು ಭೇಟಿ ಮಾಡಿದ್ದು ನಿಜ, ಆದರೆ ಬೇರೆ ವಿಚಾರ ಚರ್ಚೆ ಮಾಡಿದೆವು. ಇಲ್ಲಿ ಪವರ್ ಶೇರಿಂಗ್ ವಿಚಾರ ಚರ್ಚೆ ಇಲ್ಲ. ನಾವೆಲ್ಲರೂ ಸೇರಿ ಒಟ್ಟಾಗಿ ಶಿಸ್ತಿನಿಂದ ಕೆಲಸ ಮಾಡಬೇಕು. ಇದರ ಹೊರತಾಗಿ ಬೇರೆ ಯಾವುದೇ ವಿಚಾರವಿಲ್ಲ” ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com