
ಬೆಂಗಳೂರು: ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (KRS)ಜಲಾಶಯದ ಬಳಿ ಸುಮಾರು 92 ಕೋಟಿ ರೂ. ವೆಚ್ಚದಲ್ಲಿ ‘ಕಾವೇರಿ ಆರತಿ’ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ನೋಟಿಸ್ ಗೆ ಕಾನೂನು ಪ್ರಕಾರ ಸರ್ಕಾರ ಪ್ರತಿಕ್ರಿಯೆ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾನುವಾರ ಹೇಳಿದ್ದಾರೆ.
ಸಂಭಾವ್ಯ ಪರಿಸರ ಮತ್ತು ಸುರಕ್ಷತಾ ಕಾಳಜಿಯನ್ನು ಉಲ್ಲೇಖಿಸಿ, ಕಾವೇರಿ ಆರತಿ ಕಾರ್ಯಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ಹೈಕೋರ್ಟ್ ಶುಕ್ರವಾರ ನೋಟಿಸ್ ನೀಡಿತ್ತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಏನೇ ಆಗಲಿ ಕಾನೂನಿನ ಪ್ರಕಾರವೇ ಪ್ರತಿಕ್ರಿಯಿಸುತ್ತೇವೆ. ಪ್ರಾರ್ಥನೆಗೆ ಯಾರೂ ಅಡ್ಡಿಪಡಿಸುವುದಿಲ್ಲ. ಕೆಲವರಿಗೆ ಆತಂಕವಿದ್ದು, ಅವುಗಳನ್ನು ಪರಿಹರಿಸಲು ಸರ್ಕಾರ ಏನು ಮಾಡಬೇಕೋ ಅದನ್ನು ಮಾಡಲಿದೆ ಎಂದರು.
ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಹೈಕೋರ್ಟ್ ವಿಭಾಗೀಯ ಪೀಠ ಸಂಬಂಧಿತರಿಗೆ ನಿರ್ದೇಶನ ನೀಡಿದೆ.
ವಾರಣಾಸಿಯಲ್ಲಿ ಗಂಗಾ ಆರತಿಯ ಮಾದರಿಯಲ್ಲಿ ಕಾವೇರಿ ಆರತಿಯನ್ನು ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು,ಇದಕ್ಕೆ ರಾಜ್ಯ ಸರ್ಕಾರ ರೂ. 92. 30 ಕೋಟಿ ಮಂಜೂರು ಮಾಡಿದೆ ಎನ್ನಲಾಗುತ್ತಿದೆ.
ಜಲಸಂಪನ್ಮೂಲ ಇಲಾಖೆಯ ಯೋಜನೆಯನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ದಸರಾ ವೇಳೆಗೆ ಕಾರ್ಯಕ್ರಮ ಆಯೋಜಿಸಲು ಸರ್ಕಾರ ಯೋಜಿಸಿದ್ದು, ಸುಮಾರು 10,000 ಪ್ರೇಕ್ಷಕರಿಗೆ ಆಸನದ ವ್ಯವಸ್ಥೆ ಜೊತೆಗೆ ಪಾರ್ಕಿಂಗ್ ಮತ್ತಿತರ ಮೂಲಸೌಕರ್ಯದ ಕೆಲಸಗಳು ನಡೆಯುತ್ತಿವೆ.
ಈ ಮಧ್ಯೆ ಆಗಸ್ಟ್ ವೇಳೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂದು ಬಿಜೆಪಿ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಅಶೋಕ್ ಜ್ಯೋತಿಷ್ಯ ಅಭ್ಯಾಸ ಮಾಡಲು ಪ್ರಾರಂಭಿಸಿದ್ದಾರೆಯೇ? ಹಾಗಿದ್ದರೆ ನನಗೂ ಅಪಾಯಿಂಟ್ಮೆಂಟ್ ಕೊಡಿ, ನನಗೂ ಪ್ರಶ್ನೆಗಳಿವೆ ಎಂದರು.
Advertisement