
ಬೆಂಗಳೂರು: ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳು ಎಸ್. ವೈದ್ಯ ಅವರು ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಲಾಗಿದೆ.
ಕಾರವಾರ ಜಿಲ್ಲೆಯ ಭಟ್ಕಳ ಪಟ್ಟಣದ ಆರ್‌ಟಿಐ ಕಾರ್ಯಕರ್ತರಾದ ಶಂಕರ್ ನಾಯಕ್, ನಾಗೇಂದ್ರ ನಾಯಕ್ ಮತ್ತು ನಾಗೇಶ್ ನಾಯಕ್ ಅವರು ಸಚಿವ ಮಂಕಾಳು ವೈದ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ದೂರು ಸಲ್ಲಿಸಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ, ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ದೂರಿನ ಪ್ರಕಾರ, ಸಚಿವರು ಭಟ್ಕಳ ತಾಲೂಕಿನ ಬೈಲೂರಿನ ಸರ್ಕಾರಿ ಅರಣ್ಯ ಜಾಗದ ಸರ್ವೆ ನಂ- 600ರಲ್ಲಿ ಅಕ್ರಮವಾಗಿ ತಮ್ಮ ಬೀನಾ ವೈದ್ಯ ಶಿಕ್ಷಣ ಸಂಸ್ಥೆಗಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿರುವುದಾಗಿ ಆರೋಪಿಸಲಾಗಿದೆ.
ಮೇ 18, 2024 ರಂದು ಒತ್ತುವರಿ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ದೂರು ದಾಖಲಾಗಿದ್ದರೂ, ಅರಣ್ಯ ಅಧಿಕಾರಿಗಳು ಸಚಿವ ವೈದ್ಯ ಅವರ ಹೆಸರನ್ನು ಬಿಟ್ಟು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಚಿವ ವೈದ್ಯ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ಪ್ರಕರಣದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
Advertisement