ಒಂದನೇ ತರಗತಿ ದಾಖಲಾತಿಗೆ 6 ವರ್ಷ ವಯಸ್ಸು ಕಡ್ಡಾಯ ನಿಯಮ ಸಡಿಲಿಕೆ ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, 6 ವರ್ಷದ ನಿಯಮ ಸಡಿಲಿಕೆ ಸಾಧ್ಯವಿಲ್ಲ. ನಾನೇನು ಮಾಡಲು ಆಗೊಲ್ಲ. ಅನೇಕರು ಈ ಸಂಬಂಧ ಕೋರ್ಟ್ ಗೆ ಹೋಗಿದ್ದರು. ಕೋರ್ಟ್ ಕೂಡಾ ಅವರ ಅರ್ಜಿ ವಜಾ ಮಾಡಿದೆ. ಕೋರ್ಟ್ ನಲ್ಲಿ ಏನೇ ಆದೇಶ ಬಂದರೂ ನಾವು ಪಾಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇನ್ನು ಮಾ.22 ರಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ.
ಕಳೆದ 2 ವರ್ಷಗಳಿಂದ ಬೆಂಗಳೂರಿನಲ್ಲಿ ಯಾವುದೇ ಅಭಿವೃದ್ಧಿ ಆಗ್ತಿಲ್ಲ ಎಂದು ಇತ್ತೀಚಿಗೆ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದ ಉದ್ಯಮಿ ಮೋಹನ್ ದಾಸ್ ಪೈ ಈಗ ಡಿಕೆ ಶಿವಕುಮಾರ್ ಅವರನ್ನು ದಿಢೀರ್ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಇಂದು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವಿಸಸ್ ಸಂಸ್ಥೆ ಮುಖ್ಯಸ್ಥ ಹಾಗೂ ಇನ್ಫೋಸಿಸ್ ಮಾಜಿ CFO ಟಿ ವಿ ಮೋಹನ್ ದಾಸ್ ಪೈ ಡಿಕೆ ಶಿವಕುಮಾರ್ ಉತ್ತಮ ಸಚಿವರು, ಬೆಂಗಳೂರಿನ ಪುಟ್ ಪಾತ್, ರಸ್ತೆ, ಮೆಟ್ರೋ ಅಭಿವೃದ್ಧಿ ಸೇರಿದಂತೆ ಅವರೊಂದಿಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಇನ್ನೂ ಆರು ತಿಂಗಳಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಅವರು ಬೆಂಗಳೂರಿನ ಹಿರೋ ಆಗಬೇಕು ಎಂದು ಹೇಳಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಇದ್ದಾಗಲೂ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದೆ. ಎಲ್ಲ ಸರ್ಕಾರ ಇದ್ದಾಗ ಮಾತನಾಡಿದ್ದೇನೆ ಎಂದು ಪೈ ತಮ್ಮ ಹಿಂದಿನ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಮಂಗಳೂರು ಜಿಲ್ಲೆಯ ಬಂಟ್ವಾಳ ಬಳಿಯ ಫರಂಗಿಪೇಟೆ ಪಟ್ಟಣದ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಾಪತ್ತೆಯಾಗಿ ಐದು ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ "ನಿಷ್ಕ್ರಿಯತೆ" ಖಂಡಿಸಿ ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಫರಂಗಿಪೇಟೆ ಬಂದ್ ಮಾಡಿ, ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಕರ್ನಾಟಕ ರಾಜ್ಯ ಕೆಎಸ್‌ಆರ್‌ಪಿಯ ಎರಡು ತುಕಡಿಗಳು ಮತ್ತು 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಈ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಿಯೋಜಿಸಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಹೆಚ್ಚಿನ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು. ವಿದ್ಯಾರ್ಥಿ ನಾಪತ್ತೆ ಪ್ರಕರಣದಲ್ಲಿ "ಗಾಂಜಾ ಗ್ಯಾಂಗ್" ಭಾಗಿಯಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಮಾದಕವಸ್ತು ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದರು. ಮಂಗಳೂರು ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದರು ದಿಗಂತ್ ಫೆಬ್ರವರಿ 25 ರಂದು ಸಂಜೆ 7 ಗಂಟೆಗೆ ನಾಪತ್ತೆಯಾಗಿದ್ದಾನೆ.
ಕಾರು ಮತ್ತು ಟಿಪ್ಪರ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಕಾರಿನಲ್ಲಿದ್ದ ಮೂವರು ಪುರುಷರು ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಮಂಡ್ಯ ಮೂಲದವರು ಎಂದು ತಿಳಿದುಬಂದಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಶಿವರಾತ್ರಿ ಜಾತ್ರಾ ಮಹೋತ್ಸವದ ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳಲು ಇವರು ಕಾರಿನಲ್ಲಿ ತೆರಳುತ್ತಿದ್ದರು.
ಕರ್ನಾಟಕದಲ್ಲಿ ಉತ್ಪಾದನೆ ಮತ್ತು ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಮೇಲೆ ಇಂಗ್ಲಿಷ್ ಜೊತೆಗೆ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಕರ್ನಾಟಕದಲ್ಲಿ ತಯಾರಾಗುವ ಹಾಗೂ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಲೇಬಲ್‌ನಲ್ಲಿ ಉತ್ಪನ್ನದ ಹೆಸರು, ಬಳಕೆ ನಿರ್ದೇಶನ ಸೇರಿದಂತೆ ಎಲ್ಲವೂ ಬೇರೆ ಭಾಷೆಯ ಜೊತೆಗೆ ಕನ್ನಡದಲ್ಲಿಯೂ ಇರಬೇಕೆಂದು ಸುತ್ತೋಲೆ ತಿಳಿಸಿದೆ. ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ನ್ನು ಮಾ.12 ರಿಂದ ಜಾರಿಗೆ ತಂದಿದೆ.
Advertisement