
ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೊಳಿಸಿದ "ಪಿಎಂ ಕುಸುಮ್" ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ತೀವ್ರ ನಿರಾಸಕ್ತಿ ತೋರಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನ್ನದಾತರ ಸಬಲೀಕರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ಪಿಎಂ ಕುಸುಮ್ ಯೋಜನೆ ನೀಡಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಅದನ್ನು ಬೆಂಬಲಿಸದೆ ರೈತರನ್ನು ವಂಚಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಪಾಲಿನ ಸಬ್ಸಿಡಿ ಭರಿಸಲು ಸಾಧ್ಯವಾಗದೇ ರೈತರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಳೆಯಿಂದ ವಿಧಾನ ಮಂಡಲ ಬಜೆಟ್ ಅಧಿವೇಶನ ಆರಂಭಗೊಳ್ಳಲಿದ್ದು, ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ 14 ದಿನ ಬಜೆಟ್ ಅಧಿವೇಶನ ಕಲಾಪಗಳು ನಡೆಯಲಿವೆ. ಮಾರ್ಚ್ 4ರಿಂದ 6ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಇತ್ತೀಚೆಗೆ ಬೆಂಗಳೂರಿನ ಬಿಜೆಪಿ ಶಾಸಕರು ಮತ್ತು ಸಂಸದರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಬಾರಿಯ ಬಜೆಟ್ ನಲ್ಲಿ ಬಿಜೆಪಿ ಶಾಸಕರುಗಳ ಕ್ಷೇತ್ರಕ್ಕೆ , ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲು ಮನವಿ ಮಾಡಿತ್ತು. ಸಿಎಂ ಸಿದ್ದರಾಮಯ್ಯ 16 ನೇ ಬಜೆಟ್ ಮಂಡನೆ ಮಾಡುತ್ತಿದ್ದು, ಅವರಿಗೆ ವಿಧಾನಸೌಧದಕ್ಕೆ ಆಗಮಿಸಲು ಅನುಕೂಲ ಆಗಲಿ ಎಂದು ರ್ಯಾಂಪ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಿದ್ದರಾಮಯ್ಯನವರು ಈ ಬಾರಿ ಕುಳಿತುಕೊಂಡು ಬಜೆಟ್ ಪ್ರತಿ ಓದುವ ಸಾಧ್ಯತೆಯಿದೆ.
ಸಿ.ಟಿ.ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಪ್ರಕರಣವನ್ನು ವಿಧಾನ ಪರಿಷತ್‌ನ ಎಥಿಕ್ಸ್ ಕಮಿಟಿಗೆ ಹಸ್ತಾಂತರಿಸಲಾಗಿದೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ – ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣ ಈಗಾಗಲೇ ಅಂತ್ಯ ಆಗಿದೆ. ಬೆಳಗಾವಿಯಲ್ಲೇ ನಾನು ಅದಕ್ಕೆ ರೂಲಿಂಗ್ ಕೊಟ್ಟಿದ್ದೆ. ಆದರೆ, ಇಬ್ಬರೂ ಮತ್ತೆ ದೂರು ಕೊಟ್ಟಿದ್ದಾರೆ. ಇದರ ಮಧ್ಯೆ ಇಬ್ಬರಿಗೂ ಸಂಧಾನ ಮಾಡೋ ಕೆಲಸಕ್ಕೆ ಮುಂದಾಗಿದ್ದೆ. ಆದರೆ, ಇದಕ್ಕೆ ಯಾರು ಒಪ್ಪಿಲ್ಲ. ಹೀಗಾಗಿ ಪ್ರಕರಣವನ್ನ ಎಥಿಕ್ಸ್ ಕಮಿಟಿಗೆ ನೀಡಿದ್ದೇನೆಂದು ಹೇಳಿದ್ದಾರೆ. ಒಂದು ತಿಂಗಳಲ್ಲಿ ವರದಿ ಕೊಡಲು ಹೇಳಿದ್ದೇನೆ. ಈ ವಿಷಯ ಸದನದಲ್ಲಿ ಚರ್ಚೆ ಆಗುವುದಿಲ್ಲ. ಎಥಿಕ್ಸ್ ಕಮಿಟಿಯಲ್ಲಿ ಸಿ.ಟಿ ರವಿ ಇದ್ದರೂ, ಈಗ ಅವರದ್ದೇ ಕೇಸ್ ಬಂದಿರುವುದರಿಂದ ಅವರನ್ನು ಎಥಿಕ್ಸ್ ಕಮಿಟಿಯಿಂದ ಕೈ ಬಿಡಲಾಗಿದೆ ಎಂದು ತಿಳಿಸಿದರು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳು ಎಸ್. ವೈದ್ಯ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಲಾಗಿದೆ. ಕಾರವಾರ ಜಿಲ್ಲೆಯ ಭಟ್ಕಳ ಪಟ್ಟಣದ ಆರ್‌ಟಿಐ ಕಾರ್ಯಕರ್ತರಾದ ಶಂಕರ್ ನಾಯಕ್, ನಾಗೇಂದ್ರ ನಾಯಕ್ ಮತ್ತು ನಾಗೇಶ್ ನಾಯಕ್ ಸಚಿವ ಮಂಕಾಳು ವೈದ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.ಈ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ದೂರು ಸಲ್ಲಿಸಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ, ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFes)ಉದ್ಘಾಟನೆ ವೇಳೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಲಾವಿದರನ್ನುದ್ದೇಶಿಸಿ ನಿಮ್ಮ 'ನಟ್ಟು ಬೋಲ್ಟ್ ಟೈಟ್ 'ಮಾಡುವೆ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೋವಿಡ್ ಮುಕ್ತಾಯಗೊಂಡ ಬಳಿಕ ನಡೆದಿದ್ದ ಕಾಂಗ್ರೆಸ್ ನ ನಮ್ಮ ಜಲ, ನಮ್ಮ ಹಕ್ಕು ಪಾದಯಾತ್ರೆಗೆ ಕಲಾವಿದರು ಬೆಂಬಲಿಸಿರಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಡಿಕೆ ಶಿವಕುಮಾರ್ ಯಾರು ಯಾರಿಗೆ ಎಲ್ಲೆಲ್ಲಿ ನೆಟ್ಟು ಬೋಲ್ಟು ಟೈಟ್ ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಹೇಳಿದ್ದರು. ಬಹಿರಂಗ ವೇದಿಕೆ ಕಾಂಗ್ರೆಸ್ ಪಕ್ಷದ ರಾಜಕೀಯ ಪಾದಯಾತ್ರೆಗೆ ಸಿನಿಮಾ ಕಲಾವಿದರು ಬರುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ಕಾಂಗ್ರೆಸ್ ಪಕ್ಷಕ್ಕೆ ನಡೆದುಕೊಳ್ಳುವ ಕಲಾವಿದರಿಗೆ ಮನ್ನಣೆ ಸಿಗುತ್ತದೆ, ಇಲ್ಲವಾದರೆ ಸಿಗುವುದಿಲ್ಲ ಎನ್ನುವ ನಿಮ್ಮ ಮಾತು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.
Advertisement